ಕಸಾಪ ಭವನಕ್ಕೆ ರು. 5 ಲಕ್ಷ
ಅರಕಲಗೂಡು: ಅ.ನ.ಕೃ ಶತಮಾನೋತ್ಸವ ಸಂದರ್ಭದಲ್ಲಿ ತಾಲೂಕಿನಲ್ಲಿ ನಿರ್ಮಾಣವಾಗುವ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ರು. 5 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎ. ಮಂಜು ಭರವಸೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದಲ್ಲಿ ಆಯೋಜಿಸಿದ್ದ ಅನಕೃ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನಕೃ ಹುಟ್ಟಿ ಬೆಳೆದ ಅರಕಲಗೂಡು, ಅವರ ಹೆಸರಿನಿಂದಲೇ ಗುರುತಿಸಿಕೊಳ್ಳುವಂತಾಗಿದೆ. ಪಟ್ಟಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿ ವೃತ್ತಕ್ಕೆ ಹೆಸರಿಡಲಾಗಿದೆ. ಕನ್ನಡ ಭವನ ಸ್ಥಾಪಿಸಿ, ಅವರ ಹೆಸರು ಉಳಿಯುವಂತಹ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಖ್ಯಾತ ಕಾದಂಬರಿಕಾರ ಕೌಂಡಿನ್ಯ ಮಾತನಾಡಿದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಮಾತನಾಡಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಹಾಗೂ ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಾರ್ಷಿಕ ಪ್ರಶಸ್ತಿ ನೀಡುತ್ತಿದೆ. ಈ ಸಾಲಿನಿಂದ ಅನಕೃ ಅವರ ಹೆಸರಿನಲ್ಲಿ ರು. 5000 ಮೊತ್ತದ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಪಟ್ಟಣದಲ್ಲಿ ಕ.ಸಾ.ಪ ನಿವೇಶನ ಹೊಂದಿದ್ದು, ಇದರಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡಲು ಮಂಜು ಸಹಕಾರ ನೀಡಬೇಕು ಎಂದರು.
ಸಾಹಿತಿ ಗೊರೂರು ಶಿವೇಶ್, ತಾಲೂಕು ಕ.ಸಾ.ಪ ಜಂಟಿ ಕಾರ್ಯದರ್ಶಿ ಅರಕಲಗೂಡು ಜಯಕುಮಾರ್ ಮಾತನಾಡಿದರು. ಪರಿಷತ್ತಿನ ಪುಟ್ಟರಾಜು ಸ್ವಾಗತಿಸಿ, ನಟೇಶ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಅನಕೃ ವೃತ್ತದ ಬಳಿಗೆ ಆಗಮಿಸಿದ ಶಾಸಕ ಎ. ಮಂಜು ಅವರನ್ನು ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಜನಾರ್ಧನ್ ಮತ್ತು ಪರಿಷತ್ ಪದಾಧಿಕಾರಿಗಳು ಹಾರ ಹಾಕಿ ಸ್ವಾಗತಿಸಿದರು.
ನಂತರ ಅಲಂಕೃತಗೊಂಡಿದ್ದ ಅನಕೃ ಮಂಟಪದಲ್ಲಿ ಅನಕೃ ಪ್ರತಿಮೆಗೆ ಹಾರ ಹಾಕಿದ ಶಾಸಕರು, ವೀರಗಾಸೆ ಮತ್ತು ಸಾಂಸ್ಕೃತಿಕ ಕಲಾತಂಡದೊಂದಿಗೆ ಮೆರವಣಿಗೆಯಲ್ಲಿ ಸಭಾ ಕಾರ್ಯಕ್ರಮಕ್ಕೆ ತೆರಳಿದರು. ಶಾಸಕ ಎ.ಮಂಜು, ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್ ಮತ್ತು ಸಾಹಿತಿ ಕೌಂಡಿನ್ಯ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.