'ಬಸ್ ನಿಲುಗಡೆ ಸಮಸ್ಯೆಗೆ ಶೀಘ್ರ ಪರಿಹಾರ'
ಕ.ಪ್ರ.ವಾರ್ತೆ ಸಕಲೇಶಪುರ ಮೇ 11
ಶೀಘ್ರದಲ್ಲಿ ಹಳೇ ತಾಲೂಕು ಕಚೇರಿ ಕಾಂಪೌಂಡ್ ಒಡೆಯುವ ಮೂಲಕ ಸಾರಿಗೆ ಬಸ್ಗಳ ನಿಲುಗಡೆಗೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಬಸ್ ನಿಲ್ದಾಣ ಸಮೀಪದ ಜನನಿಬಿಡ ಪ್ರದೇಶದಲ್ಲಿ ಸಾರಿಗೆ ಬಸ್ಗಳ ನಿಲುಗಡೆಗೆ ಅವಕಾಶ ಇಲ್ಲದಿರುವುದರಿಂದಾಗಿ ಸಾರ್ವಜನಿಕರು ಮಳೆ, ಛಳಿ ಹಾಗೂ ಬಿಸಿಲಿನಲ್ಲಿ ರಸ್ತೆ ಬದಿಯಲ್ಲೇ ಬಸ್ಸಿಗಾಗಿ ಕಾಯುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು ಎಂದರು.
ಈ ನಿಟ್ಟಿನಲ್ಲಿ ಹಳೇ ತಾಲೂಕು ಕಚೇರಿ ಕಾಂಪೌಂಡ್ ಒಡೆದು ಸಾರಿಗೆ ಬಸ್ಗಳ ನಿಲುಗಡೆ ಹಾಗೂ ತಂಗುದಾಣ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇದರಂತೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾಂಪೌಂಡ್ ನೆಲಸಮಕ್ಕೆ ಸೂಚಿಲಾಗಿತ್ತು. ಆದರೆ ಅನುದಾನದ ಕೊರತೆ ಹಿನ್ನಲೆಯಲ್ಲಿ ಈ ಕಾರ್ಯವನ್ನು ಪುರಸಭೆಗೆ ವಹಿಸಿಲಾಗಿದ್ದು, ಇನ್ನೊಂದು ವಾರದಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಸಾರ್ವಜನಿಕರ ಪ್ರಮುಖ ಸಮಸ್ಯೆ ಬಗೆಹರಿಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುಲೋಚನಾ ಪಕ್ಷದ ಮುಖಂಡರಾದ ಸಚಿನ್ ಪ್ರಸಾದ್, ರಾಮಕೃಷ್ಣ ಹಾಗೂ ಇತರರು ಇದ್ದರು.