ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಕ್ಷಾಂತರ ಹಣ ಪಂಗನಾಮ

Rashmi Kasaragodu
Updated On : 12 May 2014, 1:13 am

ಎ. ರಾಘವೇಂದ್ರ ಹೊಳ್ಳ
ಕ.ಪ್ರ. ವಾರ್ತೆ, ಬೇಲೂರು, ಮೇ 11
ಸ್ಥಳೀಯ ಅಂಚೆಕಚೇರಿಯಲ್ಲಿ ಗ್ರಾಹಕರು ಕೂಡಿಟ್ಟ ಹಣದ ಲೆಕ್ಕಾಚಾರವನ್ನೇ ಪೋಸ್ಟ್ ಮಾಸ್ಟರ್ ಉಲ್ಟಾಪಲ್ಟಾ ಮಾಡಿ ಲಕ್ಷಾಂತರ ರು. ಹಣ ಹಾದಿ ತಪ್ಪಿಸಿದ ಪ್ರಸಂಗ ನಡೆದಿದೆ.
ಮಲೆನಾಡು ಭಾಗದ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಲಸಾವರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಸಾಕಷ್ಟು ಕಾಫಿ ತೋಟಗಳಿವೆ. ಇಲ್ಲಿ ಕಾಫಿ ಬೆಳೆಗಾರರು ಹಾಗೂ ಸಣ್ಣಪುಟ್ಟ ರೈತರನ್ನು ಬಿಟ್ಟರೆ ಬಹುತೇಕರು ಕಾಫಿ ತೋಟದ ಕೂಲಿ ಕಾರ್ಮಿಕರು ಕಂಡು ಬರುತ್ತಾರೆ.
ಶೇ. 80 ಮಂದಿ ಅನಕ್ಷರಸ್ಥರಾಗಿರುವ ಇವರು ತಮ್ಮ ಬಹುತೇಕ ಜೀವನವನ್ನು ಕೂಲಿ ಕೆಲಸದಲ್ಲೇ ಕಳೆದಿದ್ದು, ತಾವು ದುಡಿದಿದ್ದರಲ್ಲಿ ಕೊಂಚ ಹಣವನ್ನು ಉಳಿತಾಯಕ್ಕೆ ತೊಡಗಿಸಿದ್ದಾರೆ.  
ಆರ್.ಡಿ, ಉಳಿತಾಯ ಖಾತೆ, ಜೀವ ವಿಮೆಯಂತಹ ಹಲವಾರು ಯೋಜನೆಯಲ್ಲಿ ಹಣ ತೊಡಗಿಸಲಾಗಿದ್ದು, ಅವರ ಉಳಿತಾಯದ ಕನಸು ನುಚ್ಚುನೂರಾಗಿದೆ.  
ಏನಿದು ಹಗರಣ?:  ಕಳೆದ 6 ತಿಂಗಳ ಹಿಂದೆ ಪಾರ್ವತಿ ಎಂಬವರು ಇದೇ ಪೋಸ್ಟ್ ಆಫೀಸ್‌ನಲ್ಲಿ 40 ಸಾವಿರ ಹಣವನ್ನು ಆರ್‌ಡಿ ಕಟ್ಟುತ್ತಿದ್ದರು. ಬಡ್ಡಿ ಸೇರಿ 47 ಸಾವಿರ ಆಗಿದ್ದು ತಮಗೆ ಹಣವನ್ನು ಬಿಡಿಸಲು ಹೋಗಿದ್ದಾರೆ. ಆದರೆ, ಪೋಸ್ಟ್ ಮಾಸ್ಟರ್ ಅಶೋಕ್ 1 ತಿಂಗಳು ಹಣ ವಾಪಸ್ ಕೊಡಲು ಸತಾಯಿಸಿದ್ದಾರೆ. ಆಗ ಪಾರ್ವತಿ ಅವರು ವಿಚಾರಣೆ ನಡೆಸಿದಾಗ  ಅವರ ಹೆಸರಿನಲ್ಲಿ ಯಾವುದೇ ಹಣದ ಲೆಕ್ಕ ನಮೂದಿಸದಿರುವುದು ಬೆಳಕಿಗೆ ಬಂದಿದೆ.
ಆಗ, ಅರೇಹಳ್ಳಿ ಶಾಖಾ ಪೋಸ್ಟ್ ಮಾಸ್ಟರ್ ಅಶೋಕ್ ಅವರನ್ನು ವಿಚಾರಿಸಿದಾಗ ಹಗರಣ ಬೆಳಕಿಗೆ ಬಂದಿದೆ.
ಈ ಸುದ್ದಿ ಹರಡುತ್ತಿದ್ದಂತೆ ಪೋಸ್ಟ್ ಆಫೀಸ್‌ನಲ್ಲಿ ಹಣ ತೊಡಗಿಸಿದ್ದ ಇತರರೂ ತಮ್ಮ ಉಳಿತಾಯದ ಬಗ್ಗೆ ವಿಚಾರಿಸಿದಾಗ ಅವರೂ ಮೋಸ ಹೋಗಿರುವುದು ಗೊತ್ತಾಗಿದೆ.
ಒಟ್ಟಾರೆ, ಲಕ್ಷಾಂತರ ರು. ಹಣ ಗೋಲ್ ಮಾಲ್ ಆಗಿರುವ ಬಗ್ಗೆಶಂಕೆ ವ್ಯಕ್ತವಾಗಿದೆ.
ಗ್ರಾಮಸ್ಥರ ಆಕ್ರೋಶ: ಈ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು, ಮಲಸಾವರ ಪೋಸ್ಟ್ ಮ್ಯಾನ್ ಮುತ್ತಯ್ಯನನ್ನು ಕೇಳಿದರೆ ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ಅಷ್ಟಕ್ಕೂ ಮೇಲಾಧಿಕಾರಿಗಳು ಇದ್ದಾರೆ.
ನೀವ್ಯಾರು ಕೇಳುವುದಕ್ಕೆ ಎನ್ನುತ್ತಾರೆ 1 ವಾರದಲ್ಲಿ ನ್ಯಾಯ ದೊರಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



'ಮಾಸ್ಟರ್‌' ನಾಪತ್ತೆ
ಇತ್ತ, ಹಗರಣದ ಬಿಸಿ ಏರುತ್ತಲೇ ಪೋಸ್ಟ್ ಮಾಸ್ಟರ್ ಅಶೋಕ್ ನಾಪತ್ತೆಯಾಗಿರುವ ಬಗ್ಗೆ ಅವರ ಮನೆಯವರು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಕಳೆದ 2 ದಿನದ ಹಿಂದೆ ಧರ್ಮಸ್ಥಳದಿಂದ ಅಂಚೆಯಲ್ಲಿ ಗ್ರಾಮದ ಪ್ರಮುಖರಾದ ಗೋಪಾಲ್, ಮಂಜುನಾಥ್ ಸೇರಿದಂತೆ ನಾಲ್ವರಿಗೆ ಅಂಚೆಯಲ್ಲಿ ಅಶೋಕ್ ಅವರಿಂದ ಪತ್ರ ಬಂದಿದೆ. ಅದರಲ್ಲಿ ತಾವು ಮಲಸಾವರ ಪೋಸ್ಟ್ ಮ್ಯಾನ್ ಮುತ್ತಯ್ಯ ಎಂಬುವರಿಂದ ಮೋಸ ಹೋಗಿದ್ದಾಗಿ ಆತ ಹಣವನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.



ಇವರೇನಂತಾರೆ... ?


ಮಲಸಾವರ ಅಂಚೆ ಕಚೇರಿ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ನಾಪತ್ತೆಯಾದ ಪೋಸ್ಟ್ ಮಾಸ್ಟರ್ ಅವರನ್ನು ಹಿಡಿದ ಮೇಲೆ ಮತ್ತಷ್ಟು ಹೆಚ್ಚಿನ ತನಿಖೆ ನಡೆಯುತ್ತದೆ. ತಮ್ಮ ಹಣದ ಬಗ್ಗೆ ಗ್ರಾಮಸ್ಥರು ಭಯಪಡಬೇಕಿಲ್ಲ. ಅವರ ಬಳಿ ಸೂಕ್ತ ದಾಖಲಾತಿ ಇದ್ದಲ್ಲಿ ಪರಿಹಾರ ನೀಡಲಾಗುತ್ತದೆ.
ಟಿ ಚಂದ್ರಶೇಖರ್ ಆಚಾರ್ಯ ಜಿಲ್ಲಾ ಹಿರಿಯ ಅಧೀಕ್ಷಕ, ಅಂಚೆ ಇಲಾಖೆ
ನಾನು ಅಂಚೆ ಕಚೇರಿಯಲ್ಲಿ ರು. 40 ಸಾವಿರ ಮೊತ್ತದ ಆರ್‌ಡಿ ಕಟ್ಟಿದ್ದೆ. ಈಗ ನನ್ನ ಅಮ್ಮನಿಗೆ ಕ್ಯಾನ್ಸರ್ ಇದೆ. ಅವರ ಚಿಕಿತ್ಸೆಗಾಗಿ ಹಣ ಬಿಡಿಸಿಕೊಳ್ಳಲು ಹೋದಾಗ, ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಈಗ ನಾನೇನು ಮಾಡ್ಲಿ ?
ಟಿ ಮೀನಾಕ್ಷಿ
ಕೂಲಿ ಕಾರ್ಮಿಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement