ಆಲೂ ವರ್ತಕರ ವಿರುದ್ಧ ರೈತರ ಆಕ್ರೋಶ
ಹಾಸನ,: ಬಿತ್ತನೆ ಆಲೂಗಡ್ಡೆಯನ್ನು ಹೆಚ್ಚಿನ ದರಕ್ಕೆ ಹಾಗೂ ಕೊಳೆತ ಆಲೂಗಡ್ಡೆಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಆಲೂಗಡ್ಡೆಯನ್ನು ರಸ್ತೆಯಲ್ಲಿ ಸುರಿದು ಸೋಮವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರೈತರು ಆಲೂಗಡ್ಡೆ ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆಯಲ್ಲಿ ಕಳೆದ ಮೂರು ದಿವಸಗಳಿಂದ ಆಲೂ ಮಾರಾಟ ನಡೆಯುತ್ತಿದ್ದು, ಅದೆ ರೀತಿ ರೈತರು ಕೂಡ ಕೊಳ್ಳಲು ಮುಂದಾದರು. ಭಾರಿ ಬೇಡಿಕೆ ಇದ್ದ ಆಲೂಗೆ ದರವನ್ನು ವರ್ತಕರು ನಿಗದಿತ ಬೆಲೆಗಿಂತ ಹೆಚ್ಚು ಮಾಡಿದ್ದರಿಂದ ರೈತರು ಲಾರಿ ಲೋಡಿನ ಚೀಲವನ್ನು ರಸ್ತೆ ಮೇಲೆ ಸುರಿದು ಪ್ರತಿಭಟಿಸಿದರು.
ಜಿಲ್ಲೆಯ ವಾಣಿಜ್ಯ ಬೆಳೆಯಾದ ಆಲೂ ಬೆಳೆ ರೈತರ ಜೀವನಾಡಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಾದ ಬಿತ್ತನೆ ಆಲೂಗಡ್ಡೆ ದರ ಏರಿಕೆ, ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕಾಡು ಪ್ರಾಣಿಗಳ ಹಾವಳಿ, ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಡಿಮೆ ದರದಲ್ಲಿ ಮಾರಾಟ ಮಾಡಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವು ತೀರ್ಮಾನ ಮಾಡಿ 1900 ರು.ನಿಂದ 2000 ರು.ಒಳಗೆ ಆಲೂಗಡ್ಡೆ ಮಾರಾಟ ಮಾಡುವಂತೆ ತೀರ್ಮಾನ ಮಾಡಿದ್ದರೂ ಎಪಿಎಂಸಿಯಲ್ಲಿ ಆಲೂಗಡ್ಡೆ ವರ್ತಕರು 2200 ರು.ಗೆ ಆಲೂಗಡ್ಡೆಯನ್ನು ಮಾರಾಟ ಮಾಡುತ್ತಿದ್ದಾರೆ. ಆಲೂಗಡ್ಡೆ ಬೀಜ ಮತ್ತು ಬೆಳೆಯ ಖಾಸಗಿ ದಾಸ್ತಾನು ಮತ್ತು ವ್ಯಾಪಾರಿಗಳ ಲಾಬಿ ಹೆಚ್ಚಾಗಿದ್ದು ಇದರಿಂದ ರೈತರು ಆಲೂಗಡ್ಡೆ ಬೆಳೆಯನ್ನು ಕೈಬಿಡುವಂತಾಗಿದೆ ಎಂದರು.
ವರ್ತಕರು ಮೊದಲ ದಿನ 1900 ರು.ನಿಂದ 2000 ರು.ಗೆ ಮಾರಾಟ ಮಾಡಿದರು. ಮಳೆ ಬಂದಿದ್ದರಿಂದ ರೈತರು ಆಲೂ ಕೊಳ್ಳಲು ಮುಗಿ ಬಿದ್ದಿದ್ದರು. ಆಲೂ ಡಿಮ್ಯಾಂಡ್ ಆಗಿದ್ದನ್ನು ಗಮನಿಸಿದ ವರ್ತಕರು ಸಲ್ಪ-ಸಲ್ಪವೇ ಬೆಲೆ ಹೆಚ್ಚಿಸಲು ಪ್ರಾರಂಭಿಸಿದರು. ಸೋಮವಾರ ದಿಢೀರ್ 2300ಕ್ಕೆ ಏರಿಸಿದರು. ರೈತರು ಪ್ರಶ್ನೆ ಮಾಡಿದರೇ ವರ್ತಕರಿಂದ ಆಲೂಗಡ್ಡೆ ಕೊಡುವುದಿಲ್ಲ ಎಂದು ನಿರ್ಬಂಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಆಲೂಗಡ್ಡೆ ವರ್ತಕರು ರೈತರಿಂದ ತೆಗೆದುಕೊಳ್ಳುವ ಹಣಕ್ಕೆ ಸರಿಯಾಗಿ ಉತ್ತಮ ಗುಣಮಟ್ಟದ ಆಲೂಗಡ್ಡೆಗಳನ್ನು ನೀಡುತ್ತಿಲ್ಲ ಹಾಗೂ 50 ಕೆಜಿ ತೂಕದ ಚೀಲದಲ್ಲಿ 46 ಕೆಜಿ ನೀಡಲಾಗುತ್ತಿದೆ. ಅಲ್ಲದೆ ಕೊಳೆತ ಆಲೂಗಡ್ಡೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ ರೈತರು, ಕೂಡಲೇ ಜಿಲ್ಲಾಡಳಿತ ಈ ವಿರುದ್ಧ ಕ್ರಮಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ತಹಸೀಲ್ದಾರ್ ಮಂಜುನಾಥ್, ಉಪ ವಿಭಾಗಾಧಿಕಾರಿ ಶರತ್ ರೈತರ ಮನವೊಲಿಸಲು ಮುಂದಾಗಿ ಯಶಸ್ವಿಯಾದರು.
ಪ್ರತಿಭಟನೆಯಲ್ಲಿ ಸತ್ಯರನಾರಾಯಣ, ರಂಗೇಗೌಡ, ಮಂಜುನಾಥ್, ನಿಂಗರಾಜು, ಸೋಮಣ್ಣ, ಸಂತೋಷ್ ಹಾಗೂ ಇತರರು ಇದ್ದರು.
ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಹಾಗೂ ಕೊಳೆತ ಆಲೂಗಡ್ಡೆ ಮಾರಾಟ ಮಾಡುತ್ತಿರುವ ಬಗ್ಗೆ ಅರಿತ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ಅಧಿಕಾರಿಗೊಂದಿಗೆ ಸಭೆಯನ್ನು ನಡೆಸಿದರು.
ಆಲೂಗಡ್ಡೆ ಮಾರಾಟ ಆಗುವವರೆಗೂ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಯನ್ನು ಎಪಿಎಂಸಿಯಲ್ಲಿ ಬೀಡು ಬೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಬೆಲೆ ಹಾಗೂ ಗುಣಮಟ್ಟದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.