ಕಾಡಾನೆ ದಾಳಿಗೆಮೃತಪಟ್ಟ ರೈತ
ಸಕಲೇಶಪುರ: ಕಾಡಾನೆ ದಾಳಿಗೆ ತುತ್ತಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಮಾಗೇರಿಬೆಟ್ಟದ ಸಮೀಪ ಸೋಮವಾರ ನಡೆದಿದೆ.
ತಾಲೂಕಿನ ಯಸಳೂರು ಹೋಬಳಿಯ ಬಾಣಗೆರೆ ಗ್ರಾಮದ ತಮ್ಮೇಗೌಡ (60) ಮೃತಪಟ್ಟ ದುರ್ದೈವಿ.
ತಮ್ಮೇಗೌಡ ಎಂದಿನಂತೆ ತಮ್ಮ ತೋಟ ನೋಡಿಕೊಂಡು ಬರಲು ಭಾನುವಾರ ಬೆಳಗ್ಗೆ ಮನೆಯಿಂದ ಹೊರಟಿದ್ದರು. ಆದರೆ ಸಂಜೆಯಾದರೂ ಮನೆಗೆ ವಾಪಸ್ ಆಗದ ಕಾರಣ ಮನೆಯವರು ಭಾನುವಾರ ತೋಟದ ಸಮೀಪ ಹೋಗಿ ತಮ್ಮೇಗೌಡರಿಗಾಗಿ ಹುಡುಗಾಟ ನಡೆಸಿದ್ದರು. ಆದರೆ ತಮ್ಮೇಗೌಡ ಸಿಕ್ಕಿರಲಿಲ್ಲ.
ಈ ಹಿನ್ನೆಲೆಯಲ್ಲಿ, ಮತ್ತೆ ಸೋಮವಾರ ಬೆಳಗ್ಗೆ ಹುಡುಕಾಟ ಮುಂದುವರಿಸಲಾಗಿತ್ತು. ಹುಡುಕಾಟದ ವೇಳೆ, ಎಂ.ಎನ್. ಶಂಕರ್ ಎಂಬವರ ತೋಟದಲ್ಲಿ ತಮ್ಮೇಗೌಡರ ಮೃತದೇಹ ಪತ್ತೆಯಾಯಿತು. ಮೃತದೇಹದ ಸಮೀಪ ಕಾಡಾನೆಗಳ ಹೆಜ್ಜೆಗಳು ಕಂಡುಬಂದಿದ್ದರಿಂದ ಇದು ಕಾಡಾನೆ ತುಳಿತದಿಂದ ಉಂಟಾಗಿರುವ ಸಾವು ಎಂಬುದು ದೃಢಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಎಸಿಎಫ್ ವೆಂಕಟೇಶ್ ಹಾಗೂ ಇತರರು ಭೇಟಿ ನೀಡಿದ್ದರು.