ಕಾಮಗಾರಿ ವಿಳಂಬಕ್ಕೆ ಉದಾಸೀನವೇ ಕಾರಣ: ನೀಲೂಫರ್
ಆಲೂರು: ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯ ಉದಾಸೀನತೆಯಿಂದ ಪಟ್ಟಣದ ಮುಖ್ಯರಸ್ತೆಯ ಕಾಮಗಾರಿ ಆರಂಭವಾಗುವಲ್ಲಿ ವಿಳಂಬವಾಗುತ್ತಿದೆಯೆಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೀಲೂಫರ್ ಹೇಳಿದರು.
ಪಟ್ಟಣದ ಕೆಇಬಿ ಸರ್ಕಲ್ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಕೆಇಬಿ ಸರ್ಕಲ್ನಿಂದ ಹುಣಸವಳ್ಳಿ ಪಂಪ್ಹೌಸ್ವರೆಗಿನ 1800 ಮೀ.ಗಳ ರಸ್ತೆ ಕಾಮಗಾರಿ ಚಾಲ್ತಿಯಲ್ಲಿ ಇದ್ದು ಮುಗಿಯುತ್ತಾ ಬಂದಿದೆ. ಪಪಂ ಎಂಜಿನಿಯರ್ ಕಾಮಗಾರಿ ವೇಳೆ ಸ್ಥಳದಲ್ಲಿದ್ದು, ಅವರ ಮಾರ್ಗದರ್ಶನದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಎಂಜಿನಿಯರ್ ಸಹ ಕಾಮಗಾರಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ವಿಳಂಬವಾಗುತ್ತಿದೆ: 1900 ಮೀ.ಗಳ ಈ ರಸ್ತೆ ಕಾಮಗಾರಿ ಆರಂಭವಾಗಿ ಮುಗಿಯುತ್ತಾ ಬಂದಿದೆ. ಆದರೆ ಪಟ್ಟಣದ ಮುಖ್ಯ ರಸ್ತೆಯ (1735 ಮೀ.) ಕಾಮಗಾರಿ ಏಕೆ ಪ್ರಾರಂಭವಾಗಿಲ್ಲವೆಂಬ ಪತ್ರಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಪಂ ವತಿಯಿಂದ ಯಾವುದೇ ಅಡಚಣೆಗಳಿಲ್ಲ. ಈಗಾಗಲೇ ತಾವು ರಸ್ತೆ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಶೀಘ್ರವಾಗಿ ಪ್ರಾರಂಭಿಸಿದ್ದೇವೆ. ಆದರೆ, ಅರಣ್ಯ ಇಲಾಖೆ ಹಾಗು ಚೆಸ್ಕಾಂ ಇಲಾಖೆಯ ಉದಾಸೀನತೆಯಿಂದ ಪಟ್ಟಣದ ಮುಖ್ಯ ರಸ್ತೆಯ ಕಾಮಗಾರಿ ಆರಂಭವಾಗುವಲ್ಲಿ ವಿಳಂಬವಾಗುತ್ತಿದೆ. ಅವರು ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ ರಸ್ತೆಯ ಎರಡು ಬದಿಗಳಲ್ಲಿರುವ ಮರ ಹಾಗು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಸೂಚಿಸಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರಕುತ್ತಿಲ್ಲ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಾಸುದೇವ್, ಪಪಂ ಎಂಜಿನಿಯರ್ ಶ್ಯಾಮ್ ಮತ್ತಿತರರು ಇದ್ದರು.