'ಕೃಷಿ ಸಂಶೋಧನೆಗಳ ಅಗತ್ಯವಿದೆ'
ಸಕಲೇಶಪುರ: ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ ಹೇಳಿದ್ದಾರೆ.
ಇತ್ತೀಚೆಗೆ ತಾಲ್ಲೂಕಿನ ಬಾಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಹಾಸನ ಕೃಷಿ ಕಾಲೇಜಿನ ದ್ವಿತೀಯ ಬಿ.ಎಸ್ಸಿ (ಅಗ್ರಿ), ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಎಸ್ಸಿ (ಜೈವಿಕ ತಂತ್ರಜ್ಞಾನ) ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರೈತರು ದೇಶದ ಬೆನ್ನೆಲು ಬಾಗಿದ್ದು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಜವಾಬ್ದಾರಿ: ಕಾರ್ಮಿಕರ ಕೊರತೆ, ಆಧುನಿಕ ಯಂತ್ರಗಳ ಬಳಕೆಯಲ್ಲಿ ಹಿಂದುಳಿ ದಿರುವ ರೈತಾಪಿ ವರ್ಗ ಸಾಕಷ್ಟು ನಷ್ಟ ಹೊಂದುತ್ತಿದ್ದು, ಕೃಷಿಯನ್ನು ತ್ಯಜಿಸುವ ಹಂತಕ್ಕೆ ತಲುಪಿವೆ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡುವ ಮೂಲಕ ಈ ಕ್ಷೇತ್ರವನ್ನು ಲಾಭದಾಯಕವಾಗಿ ಮಾಡುವ ಜವಾಬ್ದಾರಿ ಈ ವಿದ್ಯಾರ್ಥಿಗಳ ಮೇಲಿದೆ ಎಂದರು.
ಹಲವು ವಿಷಯಗಳ ಮಾಹಿತಿ: ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್. ರಾಘವೇಂದ್ರ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಾಧ್ಯಕ್ಷ ಡಾ.ಎಲ್. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಸಿ. ನೀಲಕಂಠ ರಾಷ್ಟ್ರೀಯ ಸೇವಾ ಯೋಜನೆಯ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಕೃಷಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಎಸ್. ನಾಗರಾಜ್, ಕೃಷ್ಣಮ್ಮ ಶಿಬಿರದ ನೇತೃತ್ವ ವಹಿಸಿದ್ದರು.