ಮೊರಾರ್ಜಿ ವಸತಿ ಶಾಲೆಗೆ ಆಯ್ಕೆ
ಹಾಸನ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ 2014-15ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ರ್ಯಾಂಕಿಂಗ್ ಆಧಾರದ ಮೇಲೆ ಇತ್ತೀಚೆಗೆ ಕೌನ್ಸೆಲಿಂಗ್ ನಡೆಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 6 ನೇ ತರಗತಿ ಮಕ್ಕಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ನಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಪ್ರವೇಶಕ್ಕಾಗಿ ನಡೆಸಲಾದ ಪರೀಕ್ಷೆ ಫಲಿತಾಂಶದ ಪ್ರವರ್ಗವಾರು ರ್ಯಾಂಕಿಂಗ್ ಆಧಾರದ ಮೇಲೆ ಅಭ್ಯರ್ಥಿಗಳ ಮೂಲ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಗವಿಕಲರ ಮತ್ತು ದುರ್ಬಲ ವರ್ಗದ ಪ್ರಮಾಣ ಪತ್ರದೊಂದಿಗೆ ಮಕ್ಕಳೊಂದಿಗೆ ಪೋಷಕರು ಹಾಜರಾಗಿದ್ದರು. ಬೆಳಗ್ಗಿನಿಂದಲೇ ಪೋಷಕರು ತಮ್ಮ ಮಕ್ಕಳ ಜತೆ ಸರತಿ ಸಾಲಿನಲ್ಲಿ ನಿಂತು ಕೌನ್ಸಿಲಿಂಗ್ನಲ್ಲಿ ಪಾಲ್ಗೊಂಡರು. ಇದೇ ವೇಳೆ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್ ಹಾಗೂ ಜಗದೀಶ್ ಅರ್ಹ ಮಕ್ಕಳಿಗೆ ಶಾಲೆಗೆ ಸೇರಲು ಅರ್ಹತಾ ಪತ್ರ ನೀಡಿದರು.