ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೀ ಸ್ವಾಮಿ... ಮೊದ್ಲು ಕಸ ತೆಗೀರಿ

Rashmi Kasaragodu
Updated On : 13 May 2014, 1:59 am

ಕನ್ನಡಪ್ರಭ ವಾರ್ತೆ, ಹಾಸನ, ಮೇ 12
ನಗರಸಭೆಯ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಕಸದ ರಾಶಿಯನ್ನು ಒಂದು ತಿಂಗಳೊಳಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರಸಭೆಯ ಆಯುಕ್ತರ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ ನಂತರ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಉತ್ಪತ್ತಿಯಾಗುವಂತಹ ಕರಗುವಂತಹ ಹಾಗೂ ಕರಗದಂಥ ಕಸವನ್ನು ಸಂಪೂರ್ಣವಾಗಿ ಸಂತೆಪೇಟೆಯ ನಗರಸಭೆಯ ಹಿಂಭಾಗದಲ್ಲಿ ರಾಶಿ ಹಾಕಲಾಗುತ್ತಿದೆ. ಈ ಜಾಗದಲ್ಲಿ ಕಸದ ರಾಶಿ ಶಿಖರದಂತೆ ಎದ್ದಿರುವುದರಿಂದ ಈ ಭಾಗದಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ. ಇಲ್ಲಿ ಸಂಗ್ರಹಗೊಂಡಿರುವ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದ ಕಾರಣ ಕಸ ರಸ್ತೆ ತುಂಬೆಲ್ಲಾ ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಕ್ರೋಶ: ನಗರದಲ್ಲಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಕಳೆದ 20 ವರ್ಷಗಳಿಂದ ನಗರ ಹೃದಯ ಭಾಗದಲ್ಲಿಯೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂತೆಪೇಟೆಯ ಮೂಲಕ ಗೂರೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎರಡು ಬದಿಗಳಲ್ಲಿ ಕಸ ಸುರಿಯಲಾಗಿದೆ. ಇದರಿಂದ ಎರಡು ಕಡೆಗಳಲ್ಲಿ ಕಸದ ರಾಶಿ ಗಿರಿ ಶಿಖರದಂತೆ ಗೋಚರಿಸುತ್ತದೆ ಎಂದು ದೂರಿದರು.
ಈ ಕಸದ ಸಮಸ್ಯೆಯನ್ನು ಒಂದು ತಿಂಗಳೊಳಗೆ ನಿವಾರಿಸಬೇಕು. ಆಧುನಿಕ ತಂತ್ರಜ್ಞಾನ ಬಳಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ, ನಗರಸಭೆ ಆಡಳಿತದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಅಲ್ಲದೇ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷ ಹರೀಶ್  ಗೌಡ, ರಫೀಕ್ ದರ್ಬಾರ್, ಜಿಲ್ಲಾ ವಕ್ತಾರ ರಾಜೇಂದ್ರ ದೊಡ್ಡ ಮಗ್ಗೆ, ಮಾದ್ಯಮ ವಕ್ತಾರ ಸೀತಾರಾಮ್, ಜಗನ್ನಾಥ್, ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಎಸ್.ಜಿ. ಬೋರೇಗೌಡ, ನಗರ ಘಟಕದ ಶಿವು, ಬಳಗಟ್ಟೆ ಲೋಕೇಶ್, ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಹಾಗೂ ಇತರರು ಇದ್ದರು.



ಕಸ ನಿವಾರಿಸದಿದ್ದರೆ ಕೆಲಸಕ್ಕೆ ಗುಡ್ಬೈ
ನಗರಸಭೆ ಆಯುಕ್ತ ಕೃಷ್ಣಮೂರ್ತಿ ಪ್ರತಿಭಟನೆಗಾರರೊಂದಿಗೆ ಮಾತನಾಡಿ, ಈಗಾಗಲೇ 2 ಕೋಟಿ ರು. ವೆಚ್ಚದಲ್ಲಿ ವೈಜ್ಞಾನಿಕವಾಗಿ ಕಸವನ್ನು ಗೊಬ್ಬರವನ್ನಾಗಿ ಮಾಡಲು ಮಿಷನ್ ತರಿಸಲಾಗಿದೆ. ನಂತರ ಇದನ್ನು ಮಾರಾಟ ಮಾಡಿ ನಗರಸಭೆಗೆ ಲಾಭ ಬರುವಂತೆ ಮಾಡಲಾಗುತ್ತದೆ. ಒಂದು ತಿಂಗಳೊಳಗೆ ಕೆಲಸದ ರಾಶಿಯನ್ನು ಸರಿಪಡಿಸದಿದ್ದರೆ ನಾನು ಕೆಲಸದಿಂದ ನಿವೃತ್ತಿ ಹೊಂದುವುದಾಗಿ ಭರವಸೆ ನೀಡಿದರು. ಆಯುಕ್ತರು ಪ್ರತಿಭಟನಾಕರರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement