ರೋಗಿಗಳ ಸೇವಾ ವೃತ್ತಿ ವ್ಯಾಪಾರವಾಗಬಾರದು
ಚನ್ನರಾಯಪಟ್ಟಣ: ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವೃತ್ತಿಯನ್ನು ಸೇವಾ ಮನೋಭಾವದಿಂದ ಕಾಣಬೇಕೇ ಹೊರತು ವ್ಯಾಪಾರಿ ಮನೋಭಾವದಿಂದ ಕಾಣಬಾರದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ತಿಳಿಸಿದರು.
ಪಟ್ಟಣದ ನಾಗೇಶ್ ನರ್ಸಿಂಗ್ ಸ್ಕೂಲ್ ವತಿಯಿಂದ ಏರ್ಪಡಿಸಲಾಗಿದ್ದ ಶುಶ್ರೂಷಕರ ದಿನಾಚರಣೆಯಾದ 'ಲ್ಯಾಂಪ್ ಲೈಟ್' ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯ ಮತ್ತು ಅರೆ ವೈದ್ಯಕೀಯ ವೃತ್ತಿಯನ್ನು ವ್ಯಾಪಾರಿ ಮನೋಭಾವದಿಂದ ಕಾಣಲಾಗುತ್ತಿದೆ ಎಂಬ ಮಾತು ಕೇಳುತ್ತಿದ್ದು, ವೈದ್ಯ ವೃತ್ತಿಯನ್ನು ಸೇವಾ ಮನೋಭಾವದಿಂದ ನೋಡಿದರೆ ಬಡವರಿಗೆ ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಕೊರತೆ: ಡಾ. ನಾಗೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೋಗಗಳು ಮನುಷ್ಯನಲ್ಲಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ 6ಲಕ್ಷ ದಾದಿಯರ ಕೊರತೆಯಿದ್ದು, ನರ್ಸಿಂಗ್ ಕೋರ್ಸ್ಗಳನ್ನು ವ್ಯಾಸಂಗ ಮಾಡಲು ವಿದ್ಯಾರ್ಥಿಗಳ ಕೊರತೆ ಕಾಣುತ್ತಿದೆ ಎಂದು ತಿಳಿಸಿದರು. ನರ್ಸಿಂಗ್ ಕೋರ್ಸ್ ಮುಗಿದ ನಂತರ ಎಲ್ಲರಿಗೂ ಉದ್ಯೋಗದ ಅವಕಾಶವಿದ್ದು, ವಿದ್ಯಾರ್ಥಿಗಳು ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡಬೇಕು ಎಂದು ಕರೆ ನೀಡಿದರು. ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ಆದರೆ ಉದ್ಯೋಗವಕಾಶಕ್ಕಾಗಿ ಇಂಗ್ಲಿಷ್ ಭಾಷೆ ಅನಿವಾರ್ಯ ಎಂದರು.
ಹಾಸನ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ರಮೇಶ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಂಸ್ಥೆ ಕಾರ್ಯದರ್ಶಿ ಭಾರತಿ ನಾಗೇಶ್ ಕಾರ್ಯಕ್ರಮದಲ್ಲಿದ್ದರು.
ಆಲೂರಿನಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ
ತನ್ನ ಮನೆಯವರು ವಿರೋಧಿಸಿದರು ಲೆಕ್ಕಿಸದೇ ಅನಾರೋಗ್ಯ ಪೀಡಿತರ ಶುಶ್ರೂಷೆ ಮಾಡಲು ತನ್ನ ಜೀವನವನ್ನು ಮುಡಿಪಾಗಿಟ್ಟ ಧೀರ ಮಹಿಳೆ ಫ್ಲಾರೆನ್ಸ್ ನೈಟಿಂಗೇಲ್ ಎಂದು ಡಾ. ಉಷಾದೇವಿ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಶುಶ್ರೂಷ ದಿನಾಚರಣೆಯಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ರೋಗಿಗಳ ಆರೈಕೆ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಇದರಿಂದಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ಕಂಡು ಮರುಗಿದ ನೈಟಿಂಗೇಲ್ ಅವರು, ರೋಗಿಗಳ ಆರೈಕೆಗೆ ತನ್ನನ್ನು ತೊಡಗಿಸಿಕೊಂಡವರನ್ನು ಜೊತೆಗೆ ವಿಶ್ವದ ಪ್ರಥಮ ಶುಶ್ರೂಷ ಶಾಲೆ ತೆರೆದು ಇತರರು ಈ ವೃತ್ತಿಗೆ ಬರಲು ಪ್ರೇರೇಪಣೆಯಾದರು ಎಂದರು.
ಶುಶ್ರೂಷ ಅಧೀಕ್ಷಕಿ ಲೀಲಾ ಮಾತನಾಡಿ, ಲಂಡನ್ನಲ್ಲಿ ಮೊಟ್ಟಮೊದಲಿಗೆ ಶುಶ್ರೂಷಕ ಶಾಲೆ ತೆರೆದು ತರಬೇತಿ ನೀಡಿದ ನೈಟಿಂಗೇಲ್ ಅವರ ಸೇವೆ ಗುರುತಿಸಿ ಅವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಶುಶ್ರೂಷಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಲ್ ಎಚಚ್ವಿ ವನಜಾಕ್ಷಿ, ಶುಶ್ರೂಷಕರಾದ ಗೌರಮ್ಮ, ಭಾರತಿ, ಶರೀಪ್, ಲತಾ, ರೇಣುಕಾ, ಪುಟ್ಟಮ್ಮ, ಸುಮಿತ್ರ ಹಾಗೂ ಇತರರು ಇದ್ದರು.