ಓದಿನಲ್ಲೂ ಯಶಸ್ವೀ ಹೆಜ್ಜೆ
ಚನ್ನರಾಯಪಟ್ಟಣ: ಭರತನಾಟ್ಯ ಕಲಾವಿದೆ ಹಾಗೂ ಹೆಚ್ಚು ಭರತನಾಟ್ಯ ಪ್ರದರ್ಶನ ನೀಡಿ ಗಿನ್ನೀಸ್ ದಾಖಲೆ ಮಾಡಿರುವ ಸ್ವಾತಿ ಪಿ. ಭಾರದ್ವಾಜ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 77ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕು. ಸ್ವಾತಿ.ಪಿ. ಭಾರಧ್ವಾಜ್ ಅತಿ ಚಿಕ್ಕವಯಸ್ಸಿನಲ್ಲಿ ಅಂದರೆ ಪೂರ್ವ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಭರತನಾಟ್ಯ ಕ್ಷೇತ್ರಕ್ಕೆ ಕಾಲಿರಿಸಿ ಗಿನ್ನೀಸ್ ದಾಖಲೆ ಮಾಡಿದ್ದರು. ಇದೀಗ, 10ನೇ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಕು.ಸ್ವಾತಿ.ಪಿ.ಭಾರಧ್ವಾಜ್ ಸಾಧನೆ ಶ್ಲಾಘನೀಯ.
ವೇಶ್ಯಾವಾಟಿಕೆ ಮೇಲೆ ಸಿಸಿಬಿ ದಾಳಿ
ಮೈಸೂರು: ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿ, ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಜಯನಗರ ನಿವಾಸಿಗಳಾದ ಮಹೇಶ ಎಂಬವರ ಪುತ್ರ ವಿನೋದ (21), ಕೃಷ್ಣೇಗೌಡ ಎಂಬವರ ಪುತ್ರ ಶಿವರಾಜು (24) ಹಾಗೂ ಶ್ರೀರಾಂಪುರ 2ನೇ ಹಂತ ನಿವಾಸಿ ಚೆಲುವಯ್ಯ ಎಂಬವರ ಪತ್ನಿ ಗೀತಾ (30) ಬಂಧಿತ ಆರೋಪಿಗಳು. ಶ್ರೀರಾಂಪುರ 2ನೇ ಹಂತ 10ನೇ ಕ್ರಾಸ್ (ನಾಯ್ಡು ಸ್ಟೋರ್ಸ್ ಹತ್ತಿರ) ಮಹಡಿಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 1 ದ್ವಿಚಕ್ರವಾಹನ, 2700 ವಶಪಡಿಸಿಕೊಂಡಿದ್ದಾರೆ. ಈ ವೇಶ್ಯಾವಾಟಿಕೆ ಜಾಲದ ರೂವಾರಿಯಾದ ಮಹೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಶೋಧ ಮುಂದುವರಿದಿದೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿಗಳಾದ ಕಲಾ ಕೃಷ್ಣಸ್ವಾಮಿ, ಎ.ಎನ್.ರಾಜಣ್ಣ, ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಆರ್.ಜಗದೀಶ್, ಕೆ.ಎನ್. ಯಶವಂತಕುಮಾರ್, ಎಚ್.ಟಿ. ಸುನಿಲ್ಕುಮಾರ್, ಎಸ್ಐ ಶ್ರೀನಿವಾಸಗೌಡ, ಎಎಸ್ಐ ಜಯಶೀಲನ್ ಮತ್ತು ಸಿಬ್ಬಂದಿ ನಾಗೂಬಾಯಿ, ಕೆ. ವಿಜಯ್, ಮಂಜು, ಗಣೇಶ್, ಶ್ರೀಧರಪ್ರಸಾದ್ ಈ ದಾಳಿ ನಡೆಸಿದ್ದಾರೆ.
ಯುವಕ ನಾಪತ್ತೆ
ಹಾಸನ: ತಾಲೂಕಿನ ತಮ್ಲಾಪುರ ಗ್ರಾಮದ ಕೃಷ್ಣ ಅವರ ಮಗ ಕಿರಣ್ (18) ಮೇ 5ರಂದು ಮನೆಯಿಂದ ಹೊರ ಹೋದವನು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇದೆ ಆತ್ಮಹತ್ಯೆ
ಮೈಸೂರು: ರೈಲಿಗೆ ಸಿಕ್ಕಿ ಮೈಸೂರಿನ ಸಿಎಆರ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು- ಬೆಳಗೊಳ ರೈಲು ನಿಲ್ದಾಣಗಳ ನಡುವೆ ನಡೆದಿದೆ.ಚಾಮರಾಜನಗರ ಜಿಲ್ಲೆ ಪಾಳ್ಯ ಗ್ರಾಮ ನಿವಾಸಿ ಗೋವಿಂದರಾಜು (28) ಆತ್ಮಹತ್ಯೆ ಮಾಡಿಕೊಂಡವರು. ಇವರು ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದು, ಜ್ಯೋತಿನಗರದ ವಸತಿಗೃಹದಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು.ಭಾನುವಾರ ರಾತ್ರಿ ಕರ್ತವ್ಯಕ್ಕೆ ತೆರಳಿದ ಗೋವಿಂದರಾಜು, ಸೋಮವಾರ ಬೆಳಗೊಳ ಬಳಿ ರೈಲು ಹಳಿಗಳ ಮೇಲೆ ಅವರ ಮೃತದೇಹ ಪತ್ತೆಯಾಗಿದೆ. ಶವದ ಬಳಿಯಿದ್ದ ಮೊಬೈಲ್ ಸಹಾಯದಿಂದ ಗೋವಿಂದರಾಜು ಕುಟುಂಬಕ್ಕೆ ಪೊಲೀಸರು ವಿಷಯ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮೈಸೂರು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂವಾದ ಇಂದು
ಮೈಸೂರು: ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೇ 14ರ ಬೆಳಗ್ಗೆ 11ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಜಾನಪದ ಕಲಾವಿದರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಉದ್ಘಾಟಿಸಲಿದ್ದು, ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಎಚ್. ಜನಾರ್ದನ್, ನಿರ್ಮಲ ಮಠಪತಿ ಭಾಗವಹಿಸುವರು.