ಕಾರು ಡಿಕ್ಕಿ: ಪಾದಚಾರಿ ಸಾವು
ಚನ್ನರಾಯಪಟ್ಟಣ: ಕಾರೊಂದು ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಅದ್ಯಾಸ್ ಹೋಟೆಲ್ ಸಮೀಪ ಸೋಮವಾರ ನಡೆದಿದೆ. ಅರಸೀಕೆರೆ ತಾಲೂಕಿನ ಹಿರಿಯಾಳು ಗ್ರಾಮದ ವಾಸಿ ಚಿಕ್ಕೇಗೌಡ (59) ಮೃತಪಟ್ಟ ದುರ್ದೈವಿ. ಸಂಬಂಧಿಕರ ದೇವರ ಕಾರ್ಯಕ್ಕೆ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಚಿಕ್ಕೇಗೌಡ ಹೋಗಿದ್ದರು. ದೇವರ ಕಾರ್ಯ ಮುಗಿಸಿ ಊಟ ಮಾಡಿಕೊಂಡು ಮಧ್ಯಾಹ್ನ ಗ್ರಾಮಕ್ಕೆ ತೆರಳಲು ಚನ್ನರಾಯಪಟ್ಟಣ ತಾಲೂಕಿನ ದಂಡಿನಗಹಳ್ಳಿ ಹೋಬಳಿಯ ಅದ್ಯಾಸ್ ಹೋಟೆಲ್ ಬಳಿ ಬೆಂಗಳೂರು- ಮಂಗಳೂರು ರಸ್ತೆ ದಾಟುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಬಂದ ಕಾರು ಈತನಿಗೆ ಡಿಕ್ಕಿ ಹೊಡೆದಿದೆ. ನಂತರ ತೀವ್ರಗಾಯಗೊಂಡ ಚಿಕ್ಕೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.