ಪ್ರಗತಿ ಹಿನ್ನೆಡೆಗೆ ಅಧಿಕಾರಿಗಳೇ ಕಾರಣ
ಕ.ಪ್ರ.ವಾರ್ತೆ ಹಾಸನ ಮೇ 13
ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದರೂ, ಅಧಿಕಾರಿಗಳು ಭೂಚೇತನ ಕಾರ್ಯಕ್ರಮ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕೃಷಿ ಇಲಾಖೆಯ ಹಾಗೂ ರಾಜ್ಯ ಬೀಜ ನಿಗಮ ಕ್ಷೇತ್ರ ತಪಾಸಣೆ ಮಾಡಿದ ನಂತರ ಸಚಿವರು ಮಂಗಳವಾರ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಏನು ಪ್ರಯೋಜನ?: ಭೂಚೇತನ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೇವಲ ಶೇ. 25ರಷ್ಟು ಮಾತ್ರ ಪ್ರಗತಿಯಾಗಿದೆ. ರಾಜ್ಯದಲ್ಲಿ ಕೇವಲ ಶೇ. 18ರಷ್ಟು ಮಾತ್ರ ಪ್ರಗತಿಯಾಗಿದೆ. ಅಧಿಕಾರಿಗಳು ಯೋಜನೆಗಳ ಬಗ್ಗೆ ರೈತರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುತ್ತಿಲ್ಲ. ಪ್ರಗತಿ ತರುವಲ್ಲಿ ಅವರು ಹಿಂದುಳಿದಿದ್ದಾರೆ. ಈ ರೀತಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಇಲಾಖೆ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಪ್ರಗತಿ ಇಲ್ಲ: ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ನಲ್ಲಿ ಭತ್ತದ ಗುರಿಯನ್ನು ಹೊಂದಿದ್ದು, ಈಪೈಕಿ 48,500 ಹೆಕ್ಟೇರ್ ಪ್ರದೇಶಗಳ ಪ್ರಗತಿ ತೋರಿಸಲಾಗಿದೆ. ಆದರೆ ಇಳುವರಿ ಮಾತ್ರ ಇಲ್ಲ. ಕೆಎಚ್ಆರ್ 2 ಮತ್ತು ಟ್ರಾನ್ಸ್ಪ್ಲೆಂಟ್ನಲ್ಲಿಯೂ ಪ್ರಗತಿಯಾಗಿಲ್ಲ. ಬೇರೆ ಜಿಲ್ಲೆಗಳಲ್ಲಿ ಕೆಎಚ್ಆರ್ 2ನಲ್ಲಿ 35 ಕ್ಟಿಂಟಾಲ್ ಬತ್ತವನ್ನು ಎಕರೆಗೆ ಬೆಳೆಯುತ್ತಿದ್ದಾರೆ. ಕೆಎಚ್ಆರ್ 4ನಲ್ಲಿ 40ರಿಂದ 45 ಕ್ವಿಂಟಾಲ್ ಬತ್ತವನ್ನು ಎಕರೆಗೆ ಬೆಳೆಯುತ್ತಿದ್ದಾರೆ. ಟ್ರಾನ್ಸ್ಪ್ಲೆಂಟ್ನಲ್ಲಿ ಇತರೆ ಜಿಲ್ಲೆಗಳು ಪ್ರಗತಿ ಸಾಧಿಸಿವೆ. ಆದರೆ ಹಾಸನದಲ್ಲಿ ಪ್ರಗತಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಇನ್ನು ಕೆಆರ್ಎಚ್ 2ನಲ್ಲಿಯೇ ಇದ್ದಾರೆ. ಇತರೆ ಜಿಲ್ಲೆಗಳಲ್ಲಿ ಕೆಎಚ್ಆರ್ 4 ತಳಿಯನ್ನು ಬೆಳೆಯುತ್ತಿದ್ದಾರೆ. ಮಲೆನಾಡಿನಲ್ಲಿ ಕೆಆರ್ಎಚ್ 2 ತಳಿಯ 15ರಿಂದ 18 ಕ್ವಿಂಟಾಲ್ ಬತ್ತ ಬೆಳೆಯಬಹುದು. ಅರೆ ಮಲೆನಾಡಿನಲ್ಲಿ 20 ಕ್ವಿಂಟಾಲ್ ಬೆಳೆಯಬಹುದು ಎಂದ ಸಚಿವರು, ಅಧಿಕಾರಿಗಳು ಶೇಕಡಾವಾರು ಪ್ರಗತಿಯನ್ನು ಪುಸ್ತಕದಲ್ಲಿ ತೋರಿಸುತ್ತಿದ್ದಾರೆ. ಆದರೆ ಅದು ರೈತರಿಗೆ ಮುಟ್ಟಿಲ್ಲ ಎಂದರು.
ಬೆಳೆ ವಿಮೆಯಲ್ಲಿ ಬದಲಾವಣೆ: ಬೆಳೆ ವಿಮೆಗೆ ಸಂಬಂಧಿಸಿದಂತೆ ಪ್ರಸ್ತುತ ಇರುವಂತಹ ವಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಅದಕ್ಕಾಗಿ ಸರ್ಕಾರ ವಿಮಾ ಯೋಜನೆಯಲ್ಲಿ ಸ್ವಲ್ಪ ಬದಲಾವಣೆಯನ್ನು ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮಕೈಗೊಳ್ಳಲು ತೀರ್ಮಾನಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 12,653 ರೈತರಿಗೆ ಬೆಳೆ ವಿಮೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಹೋಬಳಿ ಮಟ್ಟದಲ್ಲಿ ಇರುವಂತಹ ಮಳೆ ಮಾಪನ ಕೇಂದ್ರಗಳನ್ನು ಇನ್ನು 1 ವರ್ಷದಲ್ಲಿ ಪ್ರತಿ ಪಂಚಾಯ್ತಿಗಳಲ್ಲಿ ಒಂದು ಮಳೆ ಮಾಪನ ಕೇಂದ್ರವನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.
ತಾಕೀತು: ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಹಣವು ರೈತರಿಗೆ ಸರಿಯಾಗಿ ತಲುಪುವಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದ ಸಚಿವರು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮಗೆ ತಲುಪಿಸುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಉಪೇಂದ್ರ ಪ್ರತಾಪ್ ಸಿಂಗ್ ಅವರಿಗೆ ತಾಕೀತು ಮಾಡಿದರು.
12 ಸಾವಿರ ರೈತರಿಗೆ ವಿಮೆ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ್ ಪ್ರತಿಕ್ರಿಯಿಸಿ, ಭೂಚೇತನ ಯೋಜನೆಯ ಬಗ್ಗೆ ರೈತರನ್ನು ಮನವೊಲಿಸುವಂತೆ ಮಾಡಲಾಗಿದೆ. ಪ್ರಾರಂಭದಲ್ಲಿ ಕಡಿಮೆ ಇತ್ತು. ಆದರೆ ಈಗ ಅದನ್ನು ಶೇ. 60ಕ್ಕೆ ಏರಿಸುವ ಕಾರ್ಯ ಮಾಡಲಾಗುತ್ತದೆ. ಇನ್ನು ಕೆಆರ್ಎಚ್2 ತಳಿ ಭತ್ತವನ್ನು ಕೈಗೊಳ್ಳಲು ರೈತರು ಮುಂದು ಬರುತ್ತಿಲ್ಲ. ಅದು ಸ್ವಲ್ಪ ವಾಸನೆ ಇರುವುದರಿಂದ ರೈತರು ಮುಂದಾಗುತ್ತಿಲ್ಲ. ಇನ್ನು ಮುಂದೆ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ 12,653 ರೈತರು ಬೆಳೆ ವಿಮೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಆಯುಕ್ತ ಸುಬೋಧ ಯಾದವ್ ಮಾತನಾಡಿ, ಏನೇ ಸಮಸ್ಯೆಗಳಿದ್ದರೂ ಅದನ್ನು ನಮಗೆ ತಿಳಿಸಬೇಕು. ಸರ್ಕಾರದ ಯೋಜನೆಗಳು ರೈತರಿಗೆ ತಲುಪಬೇಕು ಎಂದರು.
ಅಧಿಕಾರಿಗಳನ್ನು ನೇಮಿಸಿ: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಹೋಬಳಿ ಮಟ್ಟದಲ್ಲಿ ಮಳೆ ಮಾಪನ ಕೇಂದ್ರಗಳಿದ್ದು, ಅದನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೇಂದ್ರಗಳನ್ನು ತೆರೆದರೆ ಅನುಕೂಲವಾಗಲಿದೆ. ಎಲ್ಲೆಲ್ಲಿ ಎಷ್ಟೇ ಮಳೆಯಾಗಿದೆ ಎಂಬ ಖಚಿತ ಮಾಹಿತ ಲಭ್ಯವಾಗಲಿದೆ ಎಂದ ಅವರು, ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಚನ್ನರಾಯಪಟ್ಟಣದಲ್ಲಿ 15 ಮಂದಿ ಅಧಿಕಾರಿಗಳು ಇರುವ ಜಾಗದಲ್ಲಿ ಕೇವಲ ನಾಲ್ಕೈದು ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳನ್ನು ನೇಮಿಸಬೇಕು ಎಂದರು.
ಪಟೇಲ್ ಶಿವರಾಂ ಆಗ್ರಹ: ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಜಿಲ್ಲೆಯ ವಾಣಿಜ್ಯ ಬೆಳೆ ಆಲೂಗಡ್ಡೆಗೆ ಬೆಳೆ ವಿಮೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆ ವಿಮೆಯಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಜೊತೆಗೆ ಈ ಬಾರಿ ಕಲಬೆರಿಕೆ ಬಿತ್ತನೆ ಬೀಜ, ಗೊಬ್ಬರ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಹಾಯಕ ಕೃಷಿ ಅಧಿಕಾರಿ ಎಸ್.ಎಸ್. ಕಟ್ಟಿಮನಿ ಮಾತನಾಡಿ, ಭೂಚೇತನ ಯೋಜನೆಯಡಿ ಲಘ ಪೋಷಕಾಂಶವನ್ನು 2010-11ರಲ್ಲಿ ಪರಿಚಯಿಸಿದಾಗ ಅಷ್ಟಾಗಿ ಪ್ರಗತಿ ಸಾಧಿಸಿರಲಿಲ್ಲ. ರೈತರು ಆಸಕ್ತಿ ತೋರಿರಲಿಲ್ಲ. ಪ್ರಸ್ತುತ ರೈತರು ಅದಕ್ಕೆ ಆಸಕ್ತಿ ತೋರಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.
ಸಚಿವರು ಹೇಳಿದ್ದೇನು ?
ಮುಂದಿನ ಒಂದು ವರ್ಷದಲ್ಲಿ ಪ್ರತಿ ಪಂಚಾಯ್ತಿಗಳಲ್ಲಿ ಒಂದು ಮಳೆ ಮಾಪನ ಕೇಂದ್ರ ಅಳವಡಿಕೆ.
ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿ ಹಣವು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಬೇಕು.
ಮಲೆನಾಡಿನಲ್ಲಿ ಕೆಆರ್ಎಚ್ 2 ತಳಿ ಬತ್ತವನ್ನು 15ರಿಂದ 18 ಕ್ವಿಂಟಲ್ ಬೆಳೆಯಬಹುದು. ಅರೆ ಮಲೆನಾಡಿನಲ್ಲಿ 20 ಕ್ವಿಂಟಲ್ ಬೆಳೆಯಬಹುದು.