ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೋಷಣೆ ವಿರುದ್ಧ ರೈತರ ಧ್ವನಿ

Rashmi Kasaragodu
Updated On : 14 May 2014, 12:56 pm

ಕ.ಪ್ರ.ವಾರ್ತೆ    ಹಾಸನ    ಮೇ 13
ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ನೀಡಿದ್ದಾರೆ ಎಂದು ಆರೋಪಿಸಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಲೂಗಡ್ಡೆ ಸುರಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳಪೆ ಆಲೂಗಡ್ಡೆ ಸುರಿದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ಗೆ ತೋರಿಸಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಕರಗಿಹೋಗುವ ಆಲೂ: ಬೇಲೂರು ತಾಲೂಕಿನ ಹಗರೆ ಗ್ರಾಮದ ಶಿವಯ್ಯ ಎಂಬವರು ಕಳೆದ ಮೇ 10ರಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಶ್ರೀಮಂಜುನಾಥ ಟ್ರೇಡರ್ಸ್ನ ಮಂಜೇಗೌಡ ಎಂಬುವರಿಂದ 24 (12 ಕ್ವಿಂಟಾಲ್) ಚೀಲ ಬಿತ್ತನೆ ಆಲೂಗಡ್ಡೆಯನ್ನು ಪ್ರತಿ ಚೀಲಕ್ಕೆ =ರು. 2 ಸಾವಿರ, ಒಟ್ಟು ರು. 24 ಸಾವಿರ ನೀಡಿ, ಖರೀದಿ ಮಾಡಿದ್ದರು. ಆದರೆ, ಆಲೂಗಡ್ಡೆಯನ್ನು ಕತ್ತರಿಸಿ ಬಿತ್ತನೆ ಮಾಡಲು ಮುಂದಾದ ಸಂದರ್ಭದಲ್ಲಿ ಆಲೂಗಡ್ಡೆ ಸಂಪೂರ್ಣವಾಗಿ ಕರಗಿ ಹೋಗುತ್ತಿದೆ. ಇದು ಕಳಪೆ ಗುಣಮಟ್ಟದ ಆಲೂಗಡ್ಡೆ ಎಂಬುದು ರೈತರ ವಾದ. ಇಂಥ ಅನೇಕ ಘಟನೆಗಳು ಈ ಬಾರಿ ಬಿತ್ತನೆ ಆಲೂಗಡ್ಡೆ ಖರೀದಿಸಿದ ರೈತರಿಗೆ ಆಗಿದೆ. ಈ ಬಗ್ಗೆ ವರ್ತಕರಲ್ಲಿ ಕೇಳಿದರೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟದ ಜೊತೆ ಮೋಸ: ಮೊದಲೇ ಬಿತ್ತನೆ ಆಲೂಗಡ್ಡೆ ದರ ಏರಿಕೆ, ಅಂಗಮಾರಿ ರೋಗ, ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ, ಕಾಡು ಪ್ರಾಣಿಗಳ ಹಾವಳಿ, ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಡಿಮೆ ದರದಲ್ಲಿ ಮಾರಾಟ ಮಾಡಿ ರೈತರು ನಷ್ಟ ಅನುಭವಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ವರ್ತಕರು ರೈತರಿಗೆ ಕಳಪೆ ಗುಣಮಟ್ಟದ ಆಲೂಗಡ್ಡೆ ನೀಡಿ ವಂಚಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಹಲವು ವರ್ಷಗಳಿಂದ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಡುತ್ತಿದ್ದರೂ ರೋಗ ತಡೆಗಟ್ಟಲು ಸಂಬಂಧಪಟ್ಟ ಕೃಷಿ ಇಲಾಖೆಯಿಂದ ಯಾವುದೇ ರೀತಿಯ ಕ್ರಮ  ಕೈಗೊಂಡಿಲ್ಲ. ಇದು ಇಲಾಖೆಯ ಅದಕ್ಷತೆ ತೋರಿಸುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲೊಂದು, ಅಲ್ಲೊಂದು: ಬಿತ್ತನೆ ಆಲೂಗಡ್ಡೆಯನ್ನು ಪ್ರತಿ ಕ್ವಿಂಟಲ್ಗೆ ರು. 1900ನಿಂದ ರು. 2000 ಒಳಗೆ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ವರ್ತಕರ ಸಭೆಯಲ್ಲಿ ತೀರ್ಮಾನವಾಗಿದ್ದರೂ ಎಪಿಎಂಸಿಯಲ್ಲಿ ಆಲೂಗಡ್ಡೆ ವರ್ತಕರು ಪ್ರತಿ ಕ್ವಿಂಟಲ್ಗೆ ರು. 2200 ದರ ನಿಗದಿಪಡಿಸಿದ್ದಾರೆ ಎಂದು ರೈತರು ಆಪಾದಿಸಿದರು.  ವರ್ತಕರು ಮೊದಲ ದಿನ ಬಿತ್ತನೆ ಆಲೂಗಡ್ಡೆಯನ್ನು ರು. 1900ನಿಂದ ರು. 200ಗೆ ಮಾರಾಟ ಮಾಡಿದರು. ಮಳೆ ಬಂದಿದ್ದರಿಂದ ರೈತರು ಆಲೂ ಕೊಳ್ಳಲು ಮುಗಿ ಬಿದ್ದರು. ಬೇಡಿಕೆ ಹೆಚ್ಚಿದ್ದನ್ನು ಗಮನಿಸಿದ ವರ್ತಕರು ಸೋಮವಾರದಿಂದ ಆಲೂ ಬೆಲೆಯನ್ನು ರು. 2300ಕ್ಕೆ ಏರಿಸಿದರು. ರೈತರು ಪ್ರಶ್ನೆ ಮಾಡಿದರೆ ಆಲೂಗಡ್ಡೆ ನೀಡುವುದಿಲ್ಲ ಎಂಬ ಉತ್ತರ ವರ್ತಕರಿಂದ ಬರುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕ್ರಮಕೈಗೊಳ್ಳಬೇಕು: ಉತ್ತಮ ಗುಣಮಟ್ಟದ ಆಲೂಗಡ್ಡೆಗಳನ್ನು ನೀಡುತ್ತಿಲ್ಲ ಎಂದ ಅವರು, 50 ಕೆಜಿ ತೂಕದ ಚೀಲದಲ್ಲಿ 46 ಕೆಜಿ ನೀಡಲಾಗುತ್ತಿದೆ. ಅಲ್ಲದೆ ಕೊಳೆತ ಆಲೂಗಡ್ಡೆಯನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.



ಜಿಲ್ಲಾಧಿಕಾರಿ ಭರವಸೆ
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಕೆಲವು ವರ್ತಕರು ರೈತರಿಗೆ ಅನ್ಯಾಯ ಮಾಡಿರುವ ಬಗ್ಗೆ ದೂರು ಬಂದಿದೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿ, ತೋಟಗಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ಎಪಿಎಂಸಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಇನ್ನು ಮುಂದೆ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಎಚ್ಚರವಹಿಸಲು ಕ್ರಮಕೈಗೊಳ್ಳಲಾಗುತ್ತದೆ. ಅನ್ಯಾಯ ಮಾಡಿರುವ ವರ್ತಕರಿಗೆ ನಷ್ಟ ಭರಿಸುವುದಾಗಿ ತಿಳಿಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement