ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಖಾಸಗಿ ಕಂಪನಿಗಳ ಏಜೆಂಟ್ ಆಗಿರುವ ತಂಬಾಕು ಮಂಡಳಿ

Rashmi Kasaragodu
Updated On : 15 May 2014, 1:11 am

ಹಾಸನ: ತಂಬಾಕು ಮಂಡಳಿ ರೈತ ವಿರೋಧಿ ಕಾನೂನು ತಂದು, ರೈತರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಖಾಸಗಿ ಕಂಪನಿಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಂಡಳಿ ಇರುವುದು ರೈತರ ಹಿತ ಕಾಪಾಡಲು ಎಂಬ ಸತ್ಯವನ್ನು ಮಂಡಳಿ ಅಧಿಕಾರಿಗಳು ಮರೆತಿದ್ದಾರೆ. ಬೆಳೆದ ಹೊಗೆಸೊಪ್ಪನ್ನು ತಂಬಾಕು ಮಂಡಳಿಗೇ ಮಾರಾಟ ಮಾಡುತ್ತಿದ್ದರೂ, ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ತಂಬಾಕು ಮಂಡಳಿ ವಾರ್ಷಿಕವಾಗಿ ನಿಗದಿ ಪಡಿಸಿದ ಉತ್ಪನ್ನದಲ್ಲಿ ಶೇ. 50ಕ್ಕಿಂತ ಕಡಿಮೆ ಹೊಗೆ ಸೊಪ್ಪು ನೀಡಿದ ರೈತರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ರೈತ ವಿರೋಧಿ ಧೋರಣೆ: ಪ್ರಸಕ್ತ ಸಾಲಿನ ಸದಸ್ಯತ್ವ ನವೀಕರಣದ ವೇಳೆ ಮಂಡಳಿ ನಿಗದಿಪಡಿಸಿದ ಪ್ರಮಾಣಕ್ಕಿಂತಕಡಿಮೆ ಹೊಗೆ ಸೊಪ್ಪು ಮಾರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಬೆಳೆ ಹಾಳಾಗಿ ಇಳುವರಿ ಕಡಿಮೆಯಾದರೆ ಮುಚ್ಚಳಿಕೆ ಬರೆದುಕೊಟ್ಟಿರುವ ರೈತರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು. ಮಂಡಳಿಯು ರೈತರಿಗೆ ಪ್ರತಿ 1.4 ಹೆಕ್ಟೇರ್‌ನಲ್ಲಿ 1800 ಕೆಜಿ ತಂಬಾಕು ಬೆಳೆ ಬೆಳೆಯುವಂತೆ ಒತ್ತಡ ಹಾಕಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬೆಳೆ ಬೆಳೆದ ರೈತರ ಲೈಸೆನ್ಸ್ ರದ್ದು ಮಾಡಲು ಮಂಡಳಿ ಮುಂದಾಗುವುದಾಗಿ ಮುಚ್ಚಳಿಕೆಯಲ್ಲಿ ಬರೆಸಿಕೊಳ್ಳುವ ಮೂಲಕ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ದೂರಿದರು.
ಆಕ್ರೋಶ: ಮಂಡಳಿ ನೀಡುವ ಕಳಪೆ ಗುಣಮಟ್ಟದ ಗೊಬ್ಬರದಿಂದಾಗಿ ಹಾಗೂ ನಿಗದಿತ ವೇಳೆಗೆ ಮಳೆಯಾಗದೆ ಇರುವುದರಿಂದ ರೈತರು ನಿಗದಿಪಡಿಸಲಾಗಿರುವ ಬೆಳೆ ಉತ್ಪನ್ನದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಂಡಳಿಯ ಈ ಕ್ರಮ ರೈತರ ವಿರೋಧಿಯಾಗಿದೆ.
ಕಳೆದ ಸಾಲಿನಲ್ಲಿ ರು. 200 ಕೋಟಿಯಷ್ಟು ವಹಿವಾಟು ನಡೆಸಿರುವ ತಂಬಾಕು ಮಂಡಳಿ, ಇಳುವರಿಕೆ ಹೆಚ್ಚು ಮಾಡಲು ರೈತರಿಗೆ ಸಲಹೆ- ಸಹಕಾರ ನೀಡುವ ಬದಲು ಖಾಸಗಿ ಏಜೆಂಟರಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಲ್ಪ್‌ಲೈನ್: ಮಹುಣಸೂರು, ಪಿರಿಯಾಪಟ್ಟಣದಲ್ಲಿ ಹೊಗೆಸೊಪ್ಪು ಹೆಚ್ಚಾಗಿ ಬೆಳೆಯುವ ಕ್ಷೇತ್ರದವರೇ ಆದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದರೂ ಹೊಗೆಸೊಪ್ಪು ಬೆಳೆಗಾರರ ಬಗ್ಗೆ ಅವರು ಯೋಚನೆ ಮಾಡಿಲ್ಲ. ಸದ್ಯ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವ ನಿಟ್ಟಿನಲ್ಲಿ ರಾಮನಾಥಪುರದಲ್ಲಿ ಪೊಟ್ಯಾಟೋ ಕ್ಲಬ್ ವತಿಯಿಂದ ಹೆಲ್ಪ್‌ಲೈನ್ ಮಾಡಲಾಗುವುದು ಎಂದು ಹೇಳಿದರು.
ರೈತರಿಂದ ಮುಚ್ಚಳಕೆ ಬರೆಸಿಕೊಳ್ಳುವುದನ್ನು ಮಂಡಳಿ ಕೂಡಲೇ ನಿಲ್ಲಿಸದಿದ್ದರೆ ಹೋರಾಟಕ್ಕೂ ಇಳಿಯುವುದಾಗಿ ತಿಳಿಸಿದರು.
ಇಲಾಖೆ ವಿಫಲ: ರೈತರಿಗೆ ದೃಢೀಕೃತ ಬಿತ್ತನೆ ಆಲೂಗಡ್ಡೆ ವಿತರಣೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ರೈತರಿಗೆ ದೃಢೀಕೃತ ಬಿತ್ತನೆ ಬೀಜ ವಿತರಣೆ ಮಾಡುವಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಆಲೂಗಡ್ಡೆ ಬೆಳೆಯ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ತೋಟಗಾರಿಕೆ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ನಿಷೇಧವಿದ್ದರೂ ಮಾರಾಟ: ಪೆಪ್ಸಿ ಕಂಪನಿಯ ಆಲೂಗಡ್ಡೆ ಬಿತ್ತನೆಯನ್ನು ಜಿಲ್ಲಾಡಳಿತ ನಿಷೇಧಿಸಿದ್ದರೂ, ಪೆಪ್ಸಿ ಆಲೂಗಡ್ಡೆಯನ್ನು ಮಾರಾಟ ಮಾಡಲಾಗುತ್ತಿದೆ. ರೈತರು ಅದನ್ನು ಕೊಂಡು ಬೆಳೆಯುತ್ತಿದ್ದಾರೆ.
ದೇಶದ ಸಿಪಿಆರ್‌ಐ ಸಂಸ್ಥೆ ವರ್ಷಕ್ಕೆ 2550 ಟನ್ ಆಲೂಗಡ್ಡೆ ತಳಿಯನ್ನು ಮಾತ್ರ ಉತ್ಪಾದನೆ ಮಾಡುತ್ತಿದ್ದು, ಇದರಿಂದ ಎಲ್ಲಾ ರೈತರಿಗೆ ಉತ್ತಮ ತಳಿ ತಲುಪುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಕ್ಲಬ್‌ನ ಚನ್ನಕೇಶವೇಗೌಡ, ಲೋಕೇಶ್ ಗೌಡ ಇದ್ದರು.


ಆರೋಪಗಳೇನು ?


ಟಿ ಬೆಳೆದ ಹೊಗೆಸೊಪ್ಪನ್ನು ತಂಬಾಕು ಮಂಡಳಿಗೇ ಮಾರಾಟ ಮಾಡುತ್ತಿದ್ದರೂ, ರೈತರಿಂದ ಮುಚ್ಚಳಿಕೆ
ಟಿ ವಾರ್ಷಿಕವಾಗಿ ನಿಗದಿಪಡಿಸಿದ ಉತ್ಪನ್ನದಲ್ಲಿ ಶೇ. 50ಕ್ಕಿಂತ ಕಡಿಮೆ ಹೊಗೆಸೊಪ್ಪು ನೀಡಿದ ರೈತರಿಗೆ ಸೌಲಭ್ಯ ನೀಡದೇ ವಂಚನೆ
ಟಿ ಪ್ರತಿ 1.4 ಹೆಕ್ಟೇರ್‌ನಲ್ಲಿ 1800 ಕೆಜಿ ತಂಬಾಕು ಬೆಳೆ ಬೆಳೆಯುವಂತೆ ರೈತರ ಮೇಲೆ ಮಂಡಳಿಯಿಂದ ಒತ್ತಡ
ಟಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬೆಳೆ ಬೆಳೆವ ರೈತರ ಲೈಸೆನ್ಸ್ ರದ್ದು ಮಾಡಲು ಮುಚ್ಚಳಿಕೆ ಬರೆಸಿಕೊಂಡು ಬೆದರಿಸುತ್ತಿರುವ ಮಂಡಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement