ಜೇನುಕಲ್ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ
ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಯಾದಾಪುರ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಬುದ್ಧ ಪೂರ್ಣಿಮೆ ಹಾಗೂ ತಿಂಗಳ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬುದ್ಧಪೌರ್ಣಿಮೆಯ ವಿಶೇಷತೆ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದ ಭಕ್ತಾದಿಗಳು ಬೆಟ್ಟವನ್ನೇರಿ ಸಿದ್ದೇಶ್ವರರ ಪಾದಗಳಿಗೆ ಪೂಜೆ ಸಲ್ಲಿಸಿದರು. ಕೆ.ಆರ್. ಪೇಟೆ, ಶ್ರವಣಬೆಳಗೊಳ ಭಾಗದಿಂದ 50-60 ಮಂದಿ ಜನರಿದ್ದ ಅನೇಕ ತಂಡಗಳು ಪಾದಯಾತ್ರೆಯ ಮೂಲಕ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು.
ತಿಂಗಳ ಜಾತ್ರಾ ಮಹೋತ್ಸವದ ಉತ್ಸವ ವೈಗರೆಗಳು ಬುಧವಾರ ತಡರಾತ್ರಿಯವರೆಗೂ ಜರುಗಲಿದೆ. ಜಾತ್ರೆ ಹಾಗೂ ಹುಣ್ಣಿಮೆಗೆ ಬರಲಿರುವ ಭಕ್ತಾಧಿಗಳ ಅನುಕೂಲಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕ್ಷೇತ್ರಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದ್ದರೆ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ವತಿಯಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು.