ಜೈನ ಸಾಹಿತ್ಯದೊಂದಿಗೆ ಕನ್ನಡ ಸಾಹಿತ್ಯ
ಕ.ಪ್ರ.ವಾರ್ತೆ ಹಾಸನ ಮೇ 14
ಜೈನ ಸಾಹಿತ್ಯ ರಚನೆಯೊಂದಿಗೆ ಕನ್ನಡ ಸಾಹಿತ್ಯ ಪರಂಪರೆ ಆರಂಭಗೊಂಡಿದ್ದು, ಇದು ಕನ್ನಡ ಸಾಹಿತ್ಯ ಲೋಕದ ಹೊಸ ಸಾಧ್ಯತೆಗಳಿಗೆ ನಾಂದಿ ಹಾಡಿದೆ ಎಂದು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ್ ಹೇಳಿದ್ದಾರೆ.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಶ್ರೀರಂಗ ಶಿಕ್ಷಣ ಮಹಾವಿದ್ಯಾಲಯ ಏರ್ಪಡಿಸಿದ್ದ ಶ್ರವಣಬೆಳಗೊಳ ಗೊಮ್ಮಟೇಶ್ವರ ಸಹಸ್ರಾಬ್ದಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ವಿಷಯವಾಗಿ ಅವರು ಮಾತನಾಡಿ, ಒಪ್ಪಿತ ಮನೋಧರ್ಮದಿಂದ ಪ್ರಶ್ನಿತ ಮನೋಧರ್ಮದೆಡೆಗೆ ಸಾಹಿತ್ಯದ ದಿಕ್ಕನ್ನು ಬದಲಿಸಿದ ಹೆಗ್ಗಳಿಕೆ ಜೈನ ಸಾಹಿತಿಗಳದ್ದು ಎಂದರು. 10ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಜೈನ ಸಾಹಿತಿಗಳು ಬುನಾದಿ ಹಾಕಿದರು ಎಂದು ಅವರು ತಿಳಿಸಿದರು.
ಎಂದಿಗೂ ಪ್ರಸ್ತುತ: ಪಂಪ ಕನ್ನಡ ಸಾಹಿತ್ಯ ಪರಂಪರೆಯ ಸೃಷ್ಟಿಕರ್ತ, ಸಾಹಿತ್ಯ ಮಾಹಿತಿ ನೀಡುವ ಜೊತೆಗೆ ಮಾಹಿತಿ ಹುಡುಕುವ ಪ್ರೇರಣೆ ನೀಡಬೇಕು. ಆ ನಿಟ್ಟಿನಲ್ಲಿ 21ನೇ ಶತಮಾನದ ಮಾನವನ ಹೊಯ್ದಾಟಗಳು ಜೈನ ಸಾಹಿತಿಗಳ ಕೃತಿಗಳಲ್ಲಿ ಒಡಮೂಡಿವೆ. ಸಾಹಿತ್ಯವನ್ನು ಚೌಕಟ್ಟಿನಿಂದ ಆಚೆ ನಿಂತು ನೋಡಬೇಕು. ಆಗ ಮಾತ್ರ ಅದು ಸದಾ ಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದರು.
ಹೊಸ ನೆಲೆಗಟ್ಟು: ಸಾಹಿತ್ಯ ಪರಿಷತ್ತು ತ್ರೈಮಾಸಿಕ ಸಂಪಾದಕ ಅರಕಲಗೂಡು ಜಯಕುಮಾರ್ ಮಾತನಾಡಿ, ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆ. ದೇಶದಲ್ಲಿಯೇ ಕನ್ನಡಕ್ಕೆ 2ನೇ ಪ್ರಾಚೀನ ಭಾಷೆಯೆಂಬ ಮನ್ನಣೆ ಇದೆ. ಇಂತಹ ಭಾಷೆಗೆ ಅಧಿಕೃತ ಮನ್ನಣೆ ಸಿಕ್ಕಿದ್ದು 9ನೇ ಶತಮಾನದಲ್ಲಿ. ಜೈನ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ತಂದ ಹೊಸ ನೆಲೆಗಟ್ಟು ಇಂದಿಗೂ ಮುಂದುವರೆದಿದೆ ಎಂದರು.
ಪ್ರಾಮುಖ್ಯ: ಪರಿಷತ್ತು ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಮಾತನಾಡಿ, ಕನ್ನಡ ಭಾಷಾ ಸಾಹಿತ್ಯ ಪರಂಪರೆಯನ್ನು ಇಂದಿನ ಪೀಳಿಗೆ ಅರಿಯಬೇಕಿದೆ. ಅವುಗಳನ್ನು ಅವಗಾಹನೆಗೆ ತಂದುಕೊಂಡು ಅಭಿವ್ಯಕ್ತಿಸುವ ಕ್ರಮ ಮುಖ್ಯವಾಗಿದೆ. ಈ ದಿಸೆಯಲ್ಲಿ ಜೈನ ಸಾಹಿತ್ಯ ಅಧ್ಯಯನ ಪ್ರಾಮುಖ್ಯ ಪಡೆದುಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಂಗ ಮಹಾವಿದ್ಯಾಲಯದ ಪ್ರಾಂಶುಪಾಲ ಡಿ.ಎಸ್. ನವೀನ್ ಕುಮಾರ್ ಮಾತನಾಡಿ, ಜೈನ ಸಾಹಿತ್ಯದ ಪರಂಪರೆ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯ. ಮಾತೃಭಾಷಾ ಶಿಕ್ಷಣಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕನ್ನಡ ಭಾಷೆಯ ಉಳಿವಿಗೆ ಅಡ್ಡಿಯುಂಟು ಮಾಡಿದೆ. ಈ ಕುರಿತು ಸಾಕಷ್ಟು ಚರ್ಚೆಗಳು ಆಗಬೇಕಿವೆ ಎಂದರು.
ಕನ್ನಡಿಗರು ಇಚ್ಛಾಶಕ್ತಿ
ಪ್ರದರ್ಶಿಸಬೇಕು
ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಜನಾರ್ಧನ್, ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕಾಲ ಬದಲಾದಂತೆ ಕನ್ನಡ ಬಾಷೆ ಸಾಕಷ್ಟು ಸವಾಲು ಎದುರಿಸುತ್ತಾ ಜೀವಂತಿಕೆ ಉಳಿಸಿಕೊಂಡಿದೆಯೆಂದರೆ, ಅದು ಕನ್ನಡ ಸಾಹಿತ್ಯ ಪರಂಪರೆಯಿಂದಾಗಿ ಎಂಬುದು ಸಾಬೀತಾಗಿದೆ. ಭಾಷೆಗೆ ಪ್ರಾಮುಖ್ಯತೆ ಸಿಗದಿದ್ದರೆ ಅದು ನಶಿಸುತ್ತದೆ. ಈಗಾಗಲೇ ಪಾಲಿ, ಪ್ರಾಕೃತ ಭಾಷೆಗಳ ಜೀವಂತಿಕೆ ಕಳೆದು ಹೋಗಿವೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮಹತ್ವ ಸಿಗಬೇಕು. ಅದಕ್ಕಾಗಿ ಕನ್ನಡಿಗರು ಇಚ್ಚಾಶಕ್ತಿಯನ್ನು ಪ್ರದರ್ಶಿಸುವುದು ಮುಖ್ಯವಾಗಿದೆ ಎಂದು ಕರೆ ನೀಡಿದರು