ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು
ಕ.ಪ್ರ.ವಾರ್ತೆ ಹಾಸನ ಮೇ 14
ಲೋಕಸಭಾ ಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಸಕಲ ರೀತಿಯಲ್ಲಿ ಸಜ್ಜಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ಅಧಿಕಾರಿಗಳೊಂದಿಗೆ ಬುಧವಾರ ಮತ ಎಣಿಕೆ ಕೇಂದ್ರಕ್ಕೆ ತೆರಳಿ ಸಕಲ ಸಿದ್ಧತೆಯನ್ನು ಪರಿಶೀಲಿಸಿ ಮಾಧ್ಯಮಗಳಿಗೆ ಸಿದ್ಧತೆಯ ಬಗ್ಗೆ ವಿವರಿಸಿದರು.
ಮತ ಎಣಿಕೆ ವೇಳೆ ಯಾವುದೇ ರೀತಿಯ ಅವಗಢ, ಆಗದಂತೆ ಜಿಲ್ಲಾಡಳಿತ ಎಚ್ಚರವಹಿಸಿದ್ದು, ಎಲ್ಲಾ ರೀತಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ಪ್ರತ್ಯೇಕವಾಗಿ 14 ಟೇಬಲ್‌ಗಳಲ್ಲಿ ಆಯೋಜಿಸಲಾಗಿದೆ. ಎಲ್ಲಾ ಟೇಬಲ್‌ಗಳ ಎಣಿಕೆ ಏಜೆಂಟ್‌ಗಳು ಕಾಣಲು ಅನುಕೂಲ ಕಲ್ಪಿಸಿದ್ದು, ತೊಂದರೆಗಳಾಗದಂತೆ ಮತ ಎಣಿಕೆ ಕಾರ್ಯ ನಿರ್ವಹಿಸಲು ಜಿಲ್ಲಾಡಳಿತ ಮುಂದಾಗಿದೆ.
410 ಸಿಬ್ಬಂದಿ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಕಡೆಗಳಲ್ಲಿ ಭದ್ರತೆ ಒದಗಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಣಿಕೆ ಕಾರ್ಯಕ್ಕಾಗಿ 410 ಮಂದಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪರಿಕರ ವ್ಯವಸ್ಥೆ: ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ತಾಂತ್ರಿಕ ವ್ಯವಸ್ಥೆಯನ್ನು ಎನ್‌ಐಸಿ ವತಿಯಿಂದ ನಡೆಸಿದ್ದು, ಕಡೂರು ಸೇರಿದಂತೆ 8 ವಿಧಾನಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಎಣಿಕೆ ಕೇಂದ್ರಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದೊಂದು ವಿಧಾನಸಭಾ ಕ್ಷೇತ್ರಗಳ ಕೊಠಡಿಯಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಕಲ್ಪಿಸಿದ್ದು, ರಿಟರಿನಿಂಗ್ ಆಫಿಸರ್ ಸೇರಿದಂತೆ ಇತರೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 2 ಕಂಪ್ಯೂಟರ್, 2 ಲ್ಯಾಪ್ ಟಾಪ್, ಜೆರಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎಣಿಕೆಯ ಕೊಠಡಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಭದ್ರತೆಗೆ ಕ್ರಮ: ಕೊಠಡಿಯ ಹೊರಗಡೆ ಸಿಸಿ ಟಿವಿಗಳನ್ನು ಹಾಕಲಾಗಿದೆ. ಪ್ರತಿ ಎಣಿಕೆ ರೌಂಡ್ ಮುಗಿದ ನಂತರ ಅದನ್ನು ಪ್ರಕಟಗೊಳಿಸಲಾಗುತ್ತದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಅಭ್ಯರ್ಥಿಗಳು, ಏಜೆಂಟರ್‌ಗಳೂ ಮೊಬೈಲ್ ತರುವಂತಿಲ್ಲ. ಅಧಿಕಾರಿಗಳ ಮೊಬೈಲ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡಲಾಗುತ್ತದೆ ಎಂದು ಹೇಳಿದರು.
2 ದಿನ ರಜೆ: ಎಣಿಕೆಯ ಸಂದರ್ಭದಲ್ಲಿ ಯಂತ್ರದಲ್ಲಿ ತೋರುವಂತಹ ಫಲಿತಾಂಶವನ್ನು ಚಿತ್ರೀಕರಣ ಮಾಡುವಂತಿಲ್ಲ ಎಂದ ಅನ್ಬುಕುಮಾರ್, ಮತ ಎಣಿಕೆ ನಡೆಯುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ 2 ದಿನಗಳ ಕಾಲ ರಜೆಯನ್ನು ನೀಡಲಾಗುತ್ತದೆ. ಕಡೂರು 17 ರೌಂಡ್ ಎಣಿಕೆ ನಡೆದರೆ ಹೊಳೆನರಸೀಪುರ 23 ರೌಂಡ್‌ಗಳ ಎಣಿಗೆ ನಡೆಯಲಿದೆ. 1830 ಬ್ಯಾಲೆಟ್ ಪೇಪರ್‌ಗಳು ಬಂದಿವೆ ಎಂದು ಡಿಸಿ ಮಾಹಿತಿ ನೀಡಿದರು.
ವಾಹನ ನಿಲುಗಡೆಗೆ ವ್ಯವಸ್ಥೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಮತ ಎಣಿಕೆ ಕೇಂದ್ರದಿಂದ 200 ಮೀಟರ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಡೈರಿ ವೃತ್ತದಿಂದ ಅರಣ್ಯ ಭವನದವರೆಗೆ ಸಂಚಾರ ಬಂದ್ ಮಾಡಲಾಗುತ್ತದೆ. ಸತ್ಯಮಂಗಳದವರೆ ಸಂಚಾರ ಬಂದ್ ಮಾಡಲಾಗುತ್ತದೆ. ಅರಣ್ಯ ಭವನ, ಸತ್ಯಮಂಗಳ ಕೆರೆಯ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಮೇ 17ರವರೆಗೆ ವಿಜಯೋತ್ಸವ, ಗುಂಪು ಗುಂಪಾಗಿ ಸಮಾರಂಭ ಮಾಡುವುದನ್ನು ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲ ಕೃಷ್ಣ, ಉಪವಿಭಾಗಾಧಿಕಾರಿ ಶರತ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಗವಲ್ ರಾಜಶೇಖರ್, ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಬಿಜೆಪಿಯ ನವಿಲೆ ಅಣ್ಣಪ್ಪ ಹಾಗೂ ಇತರರು ಇದ್ದರು.
ಮತ ಎಣಿಕೆ ವೇಳೆ ಯಾವುದೇ ರೀತಿಯ ಅವಗಢ, ಆಗದಂತೆ ಜಿಲ್ಲಾಡಳಿತ ಎಚ್ಚರವಹಿಸಿದ್ದು, ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆಯನ್ನು ಪ್ರತ್ಯೇಕ 14 ಟೇಬಲ್‌ಗಳಲ್ಲಿ ಆಯೋಜಿಸಲಾಗಿದೆ. ಎಲ್ಲಾ ಟೇಬಲ್‌ಗಳ ಎಣಿಕೆ ಏಜೆಂಟ್‌ಗಳು ಕಾಣಲು ಅನುಕೂಲ ಕಲ್ಪಿಸಿಲಾಗಿದೆ.
ಟಿ ವಿ. ಅನ್ಬುಕುಮಾರ್, ಜಿಲ್ಲಾಧಿಕಾರಿ ಹಾಗೂಚುನಾವಣಾಧಿಕಾರಿ
ಮತ ಎಣಿಕೆ ಕೇಂದ್ರದಿಂದ 200 ಮೀಟರ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಡೈರಿ ವೃತ್ತದಿಂದ ಅರಣ್ಯ ಭವನದವರೆಗೆ ಸಂಚಾರ ಬಂದ್ ಮಾಡಲಾಗುತ್ತದೆ. ಸತ್ಯಮಂಗಳವರೆಗೆ ಸಂಚಾರ ಬಂದ್ ಮಾಡಲಾಗುತ್ತದೆ.
ಟಿ ರವಿ ಡಿ. ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ