ಮದ್ಯ ಮಾರಾಟ ನಿಷೇಧ
ಹಾಸನ: ಶುಕ್ರವಾರ (ಮೇ16)ದಂದು ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇರುವ ಹಿನ್ನಲೆಯಲ್ಲಿ ಮೇ 15ರಂದು ಮಧ್ಯರಾತ್ರಿಯಿಂದ 16ರ ಮಧ್ಯರಾತ್ರಿವರೆಗೆ ಎಲ್ಲಾ ಬಗೆಯ ಮದ್ಯ ಹಾಗೂ ನಷೆ ತರುವ ಅಮಲು ಪಾನೀಯಗಳನ್ನು ಸಂಗ್ರಹಿಸಿಡುವುದು, ಶೇಖರಿಸುವುದನ್ನು ನಿಷೇಧಿಸಲಾಗಿದೆ. ಜಿಲ್ಲಾದ್ಯಂತ ಇರುವ ಎಲ್ಲಾ ರೀತಿಯ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಅಂಗಡಿಗಳಲ್ಲಿ, ಕ್ಲಬ್ಗಳಲ್ಲಿ, ಡಾಬಾಗಳಲ್ಲಿ, ಸ್ಟಾರ್ ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ, ಮದ್ಯದಂಗಡಿಗಳಲ್ಲಿ, ಮದ್ಯ ಮಾರಾಟ ಮತ್ತು ಸರಬರಾಜು ಸೇವೆ ಮಾಡುವುದನ್ನು, ಮದ್ಯ ಸಾಗಾಟ ಹಾಗೂ ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಲೇಜಿಗೆ ರಜೆ
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 16ರಂದು ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಪ್ರಾಧ್ಯಾಪಕ ವೃಂದದವರ ಪ್ರವೇಶಕ್ಕೆ ನಿರ್ಬಂಧ ಉಂಟಾಗಿರುವುದರಿಂದ ಮೇ 15ರಂದು ಮತ್ತು 16ರಂದು ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.