ವೈಡಿಡಿ ಕಾಲೇಜಿಗೆ 'ಬಿ' ಶ್ರೇಣಿ ಮಾನ್ಯತೆ
ಬೇಲೂರು: ಬೇಲೂರಿನ ಯಮಸಂಧಿ ದ್ಯಾವೇಗೌಡ ದೇವಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನ್ಯಾಕ್ ಮರುಮೌಲ್ಯಮಾಪನ ಪ್ರಕ್ರಿಯೆ 2014ರ ಫೆ. 17, 18 ಮತ್ತು 19 ರಂದು ಪೂರ್ಣಗೊಂಡಿತ್ತು. ಈಗ ಮೇ 12 ರಂದು ಫಲಿತಾಂಶ ಪ್ರಕಟವಾಗಿದ್ದು, ಬಿ ಗ್ರೇಡ್ ಮಾನ್ಯತೆಗೆ ಒಳಪಟ್ಟಿದೆ. ಈ ಮೊದಲು ಕಾಲೇಜು 'ಸಿ' ಮಾನ್ಯತೆ ಪಡೆದಿದ್ದು ಈ ಬಾರಿ 'ಬಿ' ಮಾನ್ಯತೆ ಪಡೆಯುವುದರೊಂದಿಗೆ ಪ್ರಗತಿ ಪಥದಲ್ಲಿರುವುದನ್ನು ಸೂಚಿಸುತ್ತದೆ. ಈ ಯಶಸ್ಸಿಗೆ ಕಾರಣರಾದ ಕಾಲೇಜಿನ ಎಲ್ಲ ಪೂರ್ಣಕಾಲಿಕ ಮತ್ತು ಅರೆಕಾಲಿಕ ಶಿಕ್ಷಕ ಬಂಧುಗಳನ್ನು, ಆಡಳಿತ ಸಿಬ್ಬಂದಿಯನ್ನು, ಕಾಲೇಜು ಅಭಿವೃದ್ಧಿ ಸಮಿತಿಯನ್ನು, ಹಿಂದಿನ ಪ್ರಾಂಶುಪಾಲರಾದ ಡಾ. ಐ.ಎಂ. ಮೋಹನ, ವೈ.ಪಿ. ಮಲ್ಲೇಗೌಡ, ಪೋಷಕರು ಹಾಗೂ ಹಳೆ ವಿದ್ಯಾರ್ಥಿ ಬಳಗ ಹಾಗೂ ಪ್ರಸ್ತುತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು, ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಎಸ್.ರಾಜು ಮತ್ತು ನ್ಯಾಕ್ ಸಂಚಾಲಕ ಡಾ. ರಾಜಶೇಖರ ಮಠಪತಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.