ವ್ಯಾಪಾರಸ್ಥರಲ್ಲಿ ವಿನಾಕಾರಣ ಆತಂಕ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಮೇ 14
ಪಟ್ಟಣದ ಹೃದಯ ಭಾಗದಲ್ಲಿ ಹಾದುಹೋಗಿರುವ ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ವಿಸ್ತರಣೆಯ ಭೂತ ಪಟ್ಟಣದ ವ್ಯಾಪಾರಸ್ಥರ ನಿದ್ದೆಗೆಡಿಸಿದೆ. ರಸ್ತೆ ವಿಸ್ತರಣೆಯಾದರೆ ಮುಂದಿನ ನಮ್ಮ ಜೀವನದ ಗತಿ ಏನು ಎಂಬ ಆತಂಕಕ್ಕೆ ಕಾರಣವಾಗಿದೆ. ಆದರೆ ಪಟ್ಟಣದಲ್ಲಿ ಯಾವುದೇ ವಿಸ್ತರಣೆ ಇಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಹೊರವಲಯದ ಹೆದ್ದಾರಿ ವಿಸ್ತರಣೆ: ತುಮಕೂರಿನಿಂದ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 206ನ್ನು ಕೇಂದ್ರ ಸರ್ಕಾರ ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮತಿ ನೀಡಿದ್ದು, ಅರಸೀಕೆರೆ ಪಟ್ಟಣದಲ್ಲಿ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣವಾಗಿರುವುದರಿಂದ ಪಟ್ಟಣದಲ್ಲಿ ಯಾವುದೇ ವಿಸ್ತರಣೆ ಸದ್ಯದ ಮಟ್ಟಿಗೆ ಇಲ್ಲ. ಬೈಪಾಸ್ ರಸ್ತೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಪಟ್ಟಣದ ಹೊರಭಾಗದ ಗ್ರಾಮೀಣ ಭಾಗದಲ್ಲಿ ಹಾದುಹೋಗುವ ಹೆದ್ದಾರಿಯ ಎರಡೂ ಬದಿಯಲ್ಲಿ ವಿಸ್ತರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನೆನಪು ತಂದ ಆತಂಕ: ಕಳೆದ 8 ವರ್ಷಗಳ ಹಿಂದೆ ಹೆದ್ದಾರಿಯ ಎರಡೂ ಬದಿಯ 40 ಅಡಿ ವಿಸ್ತರಣೆಕ್ಕೆ ಚಾಲನೆ ನೀಡಲಾಗಿತ್ತು. ಇದರಿಂದಾಗಿ ಹೆದ್ದಾರಿ ಬದಿಯಲ್ಲಿದ್ದ ಸಾವಿರಾರು ಅಂಗಡಿಗಳು ನೆಲಸಮವಾಗಿ ಇಡೀ ಪಟ್ಟಣ ಅವಶೇಷಗಳಂತೆ ಕಂಡುಬರುತ್ತಿತ್ತು. ಇದರಿಂದ ಅನೇಕ ವ್ಯಾಪಾರಸ್ಥ ಕುಟುಂಬಗಳು ನಿರಾಶ್ರಿತರಾಗಿ ಬೀದಿಪಾಲಾಗುವಂತಾಗಿತ್ತು.
ಅಲ್ಲದೇ, ಕಟ್ಟಡದ ಮಾಲೀಕರು ಹೆಚ್ಚಿನ ಬಾಡಿಗೆ ಆಸೆಗೆ ಹಿಂದಿನಿಂದ ಇದ್ದವರಿಗೆ ಬಾಡಿಗೆಗೆ ನೀಡದೆ ಇದ್ದುದ್ದರಿಂದ ಅನೇಕರು ಊರನ್ನೇ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗುತ್ತದೆ ಎಂಬ ಆತಂಕ ಮನೆ ಮಾಡಿದೆ. ಆದರೆ, ಅಂತಹ ಯಾವುದೇ ಗಾಳಿಸುದ್ದಿಗೆ ಕಿವಿಗೊಡುವ ಅಗತ್ಯ ಇಲ್ಲ.
ಏನಿದು ಗಾಳಿಸುದ್ದಿ: ಈಗ ಹಬ್ಬಿರುವ ಗಾಳಿಸುದ್ದಿಯ ಪ್ರಕಾರ ಪಟ್ಟಣದ ಕಂತೇನಹಳ್ಳಿ ಸಮೀಪದಿಂದ ಹೊರವಲಯದ ಜಾಜೂರು ಗ್ರಾಮದವರೆವಿಗೂ ರಸ್ತೆ ವಿಸ್ತರಣೆ ಪ್ರಕ್ರಿಯೆ ಜರುಗುವುದರಿಂದ ಹೆದ್ದಾರಿಯ ಎಡ ಬಲಬದಿಗಳಲ್ಲಿರುವ ನೂರಾರು ಅಂಗಡಿಗಳು, ಕ:ಕೇರಿಗಳು, ವಸತಿ ಗೃಹಗಳು ಸೇರಿದಂತೆ ವಿವಿಧ ಬಗೆಯ ಕಟ್ಟಡಗಳನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಯ ಮಧ್ಯಭಾಗದಿಂದ ಸುಮಾರು 100 ಅಡಿಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ವಿಸ್ತರಣೆವಾಗುತ್ತದೆ ಎನ್ನಲಾಗುತ್ತಿದೆ.
ಹೆದ್ದಾರಿ ರಸ್ತೆ ಬದಿಗೆ ಹೊಂದಿಕೊಂಡಂತಿರುವ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, ಅಬಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತೋಟಗಾರಿಕಾ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಸೇರಿದಂತೆ ಬಹುತೇಕ ಕಟ್ಟಡಗಳು ನೆಲಸಮವಾಗಲಿವೆ. ಕಳೆದ ವರ್ಷವಷ್ಟೇ ಲಕ್ಷಾಂತರ ರು.ಗಳ ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ, ಹೆದ್ದಾರಿ ವಿಸ್ತರಣೆದಿಂದ ಸ್ಥಳಾಂತರವಾಗುತ್ತದೆ ಎಂಬ ಗಾಳಿಸುದ್ದಿಗಳು ಪಟ್ಟಣದಾದ್ಯಂತ ವ್ಯಾಪಿಸಿವೆ.
ಹೊರವಲಯದ ಹೆದ್ದಾರಿ ವಿಸ್ತರಣೆಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಲ್ಲದೆ ಅನುದಾನ ಕೂಡ ಬಿಡುಗಡೆ ಮಾಡಿದೆ. ಅಲ್ಲದೇ ಪ್ರಾಥಮಿಕ ಹಂತದ ಸರ್ವೇ ಕಾರ್ಯ ಸಹ ಮುಕ್ತಾಯವಾಗಿದ್ದು, ಸಧ್ಯದಲ್ಲೇ ವಿಸ್ತರಣೆ ಪ್ರಕ್ರಿಯೆಗೆ ಪಟ್ಟಣದ ಹೊರಭಾಗದಲ್ಲಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ, ಪಟ್ಟಣದ ಹೃದಯಭಾಗದಲ್ಲಿರುವ ಸಣ್ಣಪುಟ್ಟ ವ್ಯಾಪಾರಸ್ಥರು, ಅಂಗಡಿಗಳ ಮಾಲೀಕರು ಆತಂಕಕ್ಕೊಳಗಾಗದೆ ಎಂದಿನಂತೆ ತಮ್ಮ ವ್ಯಾಪಾರವನ್ನು ನಿಶ್ಚಿಂತೆಯಿಂದ ಮುಂದುವರಿಸಬಹುದಾಗಿದೆ.