ಶುಶ್ರೂಷಕರಿಗೆ ನಿಸ್ವಾರ್ಥ ಸೇವೆ ಮುಖ್ಯ
ಹೊಳೆನರಸೀಪುರ: ರೋಗಿಯ ರೋಗ ಗುಣಪಡಿಸುವಲ್ಲಿ ವೈದ್ಯರ ಚಿಕಿತ್ಸೆಯ ಜೊತೆಗೆ, ಶುಶ್ರೂಷಕರ ನಿಸ್ವಾರ್ಥ ಸೇವೆ ಹಾಗೂ ರೋಗಿಯೊಂದಿಗಿನ ಮಮತಾಮಯಿ ಒಡನಾಟವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಾಸನದ ತಹಸೀಲ್ದಾರ್ ವಿ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶುಶ್ರೂಷಕರ ದಿನಾಚರಣೆ (ಫ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಗದ ಗುಣಪಡಿಸುವಿಕೆಗೆ ಔಷಧಿ ಹಾಗೂ ಚುಚ್ಚುಮದ್ದಿನ ಜೊತೆಗೆ, ಸಾಂತ್ವನ ಹಾಗೂ ಭರವಸೆಯ ನುಡಿಗಳೂ ರೋಗದ ಗುಣಪಡಿಸುವಿಕೆಯಲ್ಲಿ ಚೇತೋಹಾರಿ ಅಂಶವಾಗಿರುತ್ತದೆ ಎಂದು ಅವರು ಹೇಳಿದರು.
ವೃತ್ತಿ ಬದುಕಿನಲ್ಲಿ ಶ್ರುಶೂಷಕರು ನಿಸ್ವಾರ್ಥ ಹಾಗೂ ತಾಳ್ಮೆಯ ಮನೋಭಾವ ಹೊಂದಿರಬೇಕು. ಶುಶ್ರೂಷಕ ವೃತ್ತಿಯು ಶ್ರೇಷ್ಠ ವೃತ್ತಿಯಾಗಿ ಪರಿಗಣಿಸಲ್ಪಟ್ಟಿದೆ ಎಂದು ಹೇಳಿದ ಅವರು, ಇದರಂತೆಯೇ ದೇಶದ ಗಡಿ ಕಾಯುವ ವೃತ್ತಿ ಸಹ ಶ್ರೇಷ್ಠ ವೃತ್ತಿ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶ್ರುಶೂಷ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಪದ್ಮಾವತಿ, ಶಕುಂತಲ, ಪುಷ್ಪವತಿ, ವೆಂಕಟೇಶಪ್ಪ ವಿದ್ಯಾರ್ಥಿನಿ ಅಕ್ಷಿತಾರನ್ನು ಗೌರವಿಸಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶುಶ್ರೂಷಕ ದಿನಾಚರಣೆಯ ದಿನದಂದೇ ಜನಿಸಿರುವ ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ಅವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿದ್ಯಾರ್ಥಿಗಳ ಕರತಾಡನ ಹಾಗೂ ಶುಭ ಹಾರೈಕೆಗಳ ನಡುವೆ ಆಚರಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಸಾವಿತ್ರಿ ಜುಪಾಲ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್. ಲಕ್ಷ್ಮೀಕಾಂತ್, ಪುರಸಭೆ ಮಾಜಿ ಸದಸ್ಯ ಬಾ.ರಾ. ಸುಬ್ಬರಾಯ, ಕರವೇ ಅಧ್ಯಕ್ಷ ಕೆರಗೋಡು ಮಹೇಶ್ ಇತರರು ಇದ್ದರು.