ಸಾಂಕ್ರಾಮಿಕ ರೋಗ ತಡೆಗಟ್ಟಿ
ಹಾಸನ: ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಬಾಧಿಸದಂತೆ ಸಂಪೂರ್ಣ ನಿಗಾವಹಿಸಬೇಕು ಹಾಗೂ ಇದಕ್ಕಾಗಿ ಸಾಂಘಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕುರಿತು ಮುಂಜಾಗ್ರತೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿರುವುದರಿಂದ ಮತ್ತು ಬೇಸಿಗೆ ಕಾಲವಾಗಿರುವುದರಿಂದ ಸೊಳ್ಳೆಗಳ ಪ್ರಮಾಣ ಹೆಚ್ಚುವ ಹಿನ್ನೆಲೆಯಲ್ಲಿ ನಿಗಾವಹಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವಹಿಸುವಂತೆ ತಿಳಿಸಿದರು.
ಅರಿವು ಮೂಡಿಸಿ: ಮಳೆಗಾಲಗಳಲ್ಲಿ ಬರುವಂತೆ ಕರುಳ ಬೇನೆ, ಕಾಲರಾ, ಮಲೇರಿಯಾ, ಡೆಂಘೀ, ಅತಿಸಾರ ಭೇದಿ ಸೇರಿದಂತೆ ಇನ್ನಿತರೆ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಚತೆ, ಉತ್ತಮ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಳೆಗಾಲದಲ್ಲಿ ಗ್ಯಾರೆಜ್ಗಳಲ್ಲಿ ಬಿಸಾಡಿದ ಹಳೇಯ ಟೈರ್ಗಳಲ್ಲಿ, ಎಳನೀರು ಮಾರಾಟ ಮಾಡುವ ಸ್ಥಳಗಳಲ್ಲಿ ಎಳೆ ನೀರು ಕುಡಿದು ಬಿಸಾಡಿದ ಖಾಲಿ ಕಾಯಿ ಮಟ್ಟೆಯಲ್ಲಿ ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನು ಪ್ರತಿನಿತ್ಯ ತೆರವುಗೊಳಿಸುವಂತೆ ವ್ಯಾಪಾರಸ್ಥರಿಗೆ ತಿಳುವಳಿಕೆ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೋಗಿಗಳ ಬಗ್ಗೆ ಮಾಹಿತಿ: ಜಿಲ್ಲೆಯಲ್ಲಿ ಏಪ್ರಿಲ್ವರೆಗೆ ಹಲವಾರು ಅನಾರೋಗ್ಯ ಪ್ರಕರಣಗಳು ಕಂಡು ಬಂದಿವೆ ಎಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್. ಶ್ಯಾಮಲಾದೇವಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಜಗೋಪಾಲ್, ಆರ್.ಸಿ. ಎಚ್. ಅಧಿಕಾರಿ ಡಾ. ಜನಾರ್ದನ್, ವಿವಿಧ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ನಗರ ಸಭೆಯ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಅನಾರೋಗ್ಯ ಪೀಡಿತ ಪ್ರಕರಣ ಮಾಹಿತಿ
836 ಕರುಳು ಬೇನೆ
229 ಕ್ಷಯ
37 ವಿಷಮಶೀತ ಜ್ವರ
118 ಏಡ್ಸ್
76 ಅರಿಶಿಣ ಕಾಮಾಲೆ
5432 ಅತಿಸಾರ ಬೇಧಿ
2371 ಆಮಶಂಕೆ ಬೇಧಿ
32 ವಿಷಾಹಾರ ಸೇವನೆ