ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಮೇದುವಾರರ ಎದೆ ಲಬ್-ಡಬ್...

Rashmi Kasaragodu
Updated On : 16 May 2014, 1:16 am

ಕ.ಪ್ರ. ವಾರ್ತೆ ಟಿ ಹಾಸನ ಟಿ ಮೇ 15
ಲೋಕಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮೇ 16ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಅಪರಾಹ್ನ 12 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ 14 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದು ಸ್ಪರ್ಧಿಸಿದ್ದರು. ಮತ ಎಣಿಕೆ ಪ್ರಕ್ರಿಯೆಯು ಬೆಳಗ್ಗೆ 8ಕ್ಕೆ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹಾಸನ, ಹೊಳೆನರಸೀಪುರ, ಸಕಲೇಶಪುರ, ಬೇಲೂರು, ಶ್ರವಣಬೆಳಗೊಳ, ಅರಸೀಕೆರೆ, ಅರಕಲಗೂಡು ಮತ್ತು ಕಡೂರು ವಿಧಾನಸಭಾಕ್ಷೇತ್ರಗಳ ವಾರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಒಂದೊಂದು ಕೊಠಡಿಯಲ್ಲಿ
ಒಂದೊಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ವ್ಯವಸ್ಥೆ ಮಾಡಿದ್ದು, ಒಂದೊಂದು ಕೊಠಡಿಯಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಕಲ್ಪಿಸಿದ್ದು, ಕಡೂರು ಕ್ಷೇತ್ರದ  17 ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಹೊಳೆನರಸೀಪುರದ 23 ಸುತ್ತಿನ ಮತ ಎಣಿಕೆ ನಡೆಯಲಿದೆ.
2196 ಮತಗಟ್ಟೆ: ಲೋಕಸಭಾ ಕ್ಷೇತ್ರದಲ್ಲಿ 2196 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ  730 ಸೂಕ್ಷ್ಮ, 314 ಅತಿಸೂಕ್ಷ್ಮ, 149 ಗಲಭೆ ಗ್ರಸ್ಥ ಮತಗಟ್ಟೆ, 1003 ಸಾಮಾನ್ಯ ಮತಗಟ್ಟೆಗಳಾಗಿದ್ದರಿಂದ ಎಲ್ಲಾ ಮತಯಂತ್ರಗಳನ್ನು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರವಾಗಿಡಲಾಗಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿದಿಂದ ಸಿದ್ಧತೆಗಳು ಪೂರ್ಣಗೊಂಡಿವೆ. 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರತ್ಯೇಕ ಕೊಠಡಿಗಳಲ್ಲಿ ತಲಾ 14 ಎಣಿಕೆ ಟೇಬಲ್‌ಗಳಲ್ಲಿ ನಡೆಸಲು ಮತ್ತು ಆ ಕೊಠಡಿಗಳಲ್ಲಿ ಎರೆಡು ಕಂಪ್ಯೂಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಾಸನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು 15,59,655 ಮತದಾರರಲ್ಲಿ 5,85,664 ಪುರುಷ ಹಾಗೂ 5,60,670 ಮಹಿಳೆಯರು ಸೇರಿದಂತೆ ಒಟ್ಟು 11,46,338 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ ಪುರುಷ ಮತದಾರರು ಶೇ.74.29 ಮತ್ತು ಶೇ.72.70 ಮಹಿಳೆಯರು ಸೇರಿದಂತೆ ಶೇ.73.50ರಷ್ಟು ಮತದಾನವಾಗಿದೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ 270 ಮತಗಟ್ಟೆಗಳಿದ್ದರೆ ಅರಸೀಕೆರೆಯಲ್ಲಿ 275, ಬೇಲೂರಿನಲ್ಲಿ 268, ಹಾಸನದಲ್ಲಿ 265, ಹೊಳೆನರಸೀಪುರದಲ್ಲಿ 316, ಅರಕಲಗೂಡಿನಲ್ಲಿ 285, ಸಕಲೇಶಪುರದಲ್ಲಿ 281 ಹಾಗೂ ಕಡೂರಿನಲ್ಲಿ 236 ಮತಗಟ್ಟೆಗಳೂ ಸೇರಿದಂತೆ 2,196 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಯಂತ್ರಗಳಲ್ಲಿ ಭದ್ರವಾಗಿದೆ.
ಅರೆ ಸೇನಾ ಪಡೆ, ಪೊಲೀಸ್ ಪಹರೆಯಲ್ಲಿರುವ ಮತಯಂತ್ರಗಳನ್ನು ಬೆಳಿಗ್ಗೆ 7.30ಕ್ಕೆ ನಂತರ ಭದ್ರತಾ ಕೊಠಡಿಗಳಿಂದ ಹೊರ ತೆರೆಯಲಾಗುವುದು. ಮೊದಲು ಅಂಚೆ ಮತ ಪತ್ರಗಳ ಎಣಿಕೆ ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆ ಪ್ರಾರಂಭವಾಗಲಿದೆ.  
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್‌ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಹಾಗೂ 8 ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಿ ಕೊನೆಯ ಹಂತದಲ್ಲಿ ಅಗತ್ಯವಿರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಮತ ಎಣಿಕೆ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ ಸಾರ್ವಜನಿಕರು ಮತ ಎಣಿಕೆ ಕೇಂದ್ರದಲ್ಲಿ ಸಂಚರಿಸದಂತೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿದ್ದು, ಶುಕ್ರವಾರ ಮಾತ್ರ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement