ಏಡ್ಸ್ ಪೀಡಿತರಿಗೆ ಪ್ರೀತಿ-ವಿಶ್ವಾಸ ತೋರಿ
ಅರಸೀಕೆರೆ: ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರೀತಿ-ವಿಶ್ವಾಸಗಳಿಂದ ಕಾಣುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದುಪ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪಿ.ಎಲ್.ನಟರಾಜ್ ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಸನ, ತಾಲೂಕು ಆರೋಗ್ಯ ಇಲಾಖೆ ಹಾಗೂ ಐಸಿಟಿಸಿ
ಕೇಂದ್ರಗಳ ವತಿಯಿಂದ ತಾಲೂಕಿನ ಯಾದಾಪುರ ಗ್ರಾಮದಲ್ಲಿ ಆರೋಗ್ಯ ಮತ್ತು ಎಚ್ಐವಿ, ಏಡ್ಸ್ ಜಾತ್ರಾ ಜನ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗಿಗಳೊಂದಿಗೆ ಮಾತನಾಡುವುದರಿಂದ ಉಪಾಹಾರ ಸೇವಿಸುವುದರಿಂದ ರೋಗ ಹರಡುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದರು.
ಎಚ್ಐವಿ ಪೀಡಿತರನ್ನು ಮನುಷ್ಯರಂತೆ ಕಾಣಬೇಕು. ರೋಗಬಾಧೆಗೆ ತುತ್ತಾದವರು ವೈದ್ಯರ ಸಲಹೆಯ ಮೇರೆಗೆ ಜೀವನ ನಡೆಸಿದರೆ ಎಲ್ಲರಂತೆ ಬಾಳಿ ಬದುಕಲು ಅವಕಾಶವಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸುವ ಇಂತಹ ಜನ ಜಾಗೃತಿ ಆಂದೋಲನದಲ್ಲಿ ಜನರು ಪಾಲ್ಗೊಂಡು ಆರೋಗ್ಯ ತಪಾಸಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎಸ್.ದಿನೇಶ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯಯುತ ಜೀವನ ನಡೆಸಲು ಅವಶ್ಯಕತೆ ಇರುವ ಸೌಲಭ್ಯ ಒದಗಿಸುವುದು ಆರೋಗ್ಯ ಇಲಾಖೆಯ ಕಳಕಳಿಯಾಗಿದೆ ಎಂದರು. ಜೇನುಕಲ್ ಸಿದ್ದೇಶ್ವರ ಕ್ಷೇತ್ರಾಭಿವೃದ್ಧಿ ಮಂಡಳಿ ಅಧ್ಯಕ್ಷ ಗೊಲ್ಲರಹಳ್ಳಿ ಬಸವರಾಜು, ಕಾರ್ಯದರ್ಶಿ ವೀರಭದ್ರಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಮೇಲ್ವಿಚಾರಕ ರವಿಕುಮಾರ್, ಜೆ.ಸಿ.ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕಿ ಉಮಾ, ವಿವಿಧ ಘಟಕಗಳ ಐಸಿಟಿಸಿ ಸದಸ್ಯರು, ದಾದಿಯರು, ಪ್ರಯೋಗಶಾಲಾ ಪರೀಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.