ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಡೆವುದೇ ದೊಡ್ಡಗೌಡರ ದೊಡ್ಡಾಟ?

Rashmi Kasaragodu
Updated On : 16 May 2014, 1:18 am

ದಯಾಶಂಕರ ಮೈಲಿ
ಹಾಸನ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮಾತ್ರವೇ ಅಲ್ಲ. ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರ ಎದೆ ಬಡಿತ ಜೋರಾಗಿದೆ. ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ಭವಿಷ್ಯವೂ ಇಂದು ಪ್ರಕಟಗೊಳ್ಳಲಿದೆ.
ಚುನಾವಣೆ ಪ್ರಚಾರ ಸಮಯದಲ್ಲಿ ಏನೇ ಬರಲಿ, ಹೋಗಲಿ.. ಗೌಡರನ್ನು ಸೋಲಿಸಲೇಬೇಕೆಂದು ಪಣ ತೊಟ್ಟು ಎಲ್ಲ ಬಗೆಯ ತಂತ್ರ ರೂಪಿಸಿ ಪ್ರಚಾರ ಮಾಡಿದ್ದ ರಾಜ್ಯ, ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಗೌಡರ ಸೋಲು-ಗೆಲವಿನ ಬಗ್ಗೆಯೇ ಚಿಂತೆಯಾಗಿದೆ ಎಂದು ಹೇಳಲಾಗುತ್ತಿದೆ.  ದೇವೇಗೌಡರು ಗೆದ್ದರೆ, ತೃತೀಯ ರಂಗ ಸರ್ಕಾರ ರಚನೆ ಕಸರತ್ತಿಗೆ ಚಾಲನೆ ದೊರೆಯುತ್ತದೆ. ಒಂದು ವೇಳೆ ಗೌಡರು ಸೋತರೆ ಈ ಕ್ರಿಯೆಗೆ ಹಿನ್ನೆಡೆಯಾಗುತ್ತದೆ ಎಂಬ ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ.



2009ರಲ್ಲಿ ಕಾಂಗ್ರೆಸ್‌ಗೆ 3 ನೇ ಸ್ಥಾನ
2009ರ ಚುನಾವಣೆಯಲ್ಲಿ ಕಾಂಗ್ರೆಸ್ 3ನೇ ಸ್ಥಾನ ಗಳಿಸಿತ್ತು. ಬಿಜೆಪಿ 2 ನೇ ಸ್ಥಾನ ಪಡೆದು ಅಚ್ಚರಿ ಮೂಡಿಸಿತ್ತು. ಜೆಡಿಎಸ್ ಅಭ್ಯರ್ಥಿ ದೇವೇಗೌಡರು  2,91,113 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದರು. ಬಿಜೆಪಿಯ ಕೆ.ಎಚ್. ಹನುಮೇಗೌಡರು 2,053,156 ಮತಗಳನ್ನು ಗಳಿಸಿದರೇ, ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಂ 2,011,47 ಮತಗಳನ್ನು ಪಡೆದಿದ್ದರು.


ಹಿಂದಿನಷ್ಟು ಲೀಡ್ ಸಾಧ್ಯವಿಲ್ಲ...
ಒಂದು ವೇಳೆ ಗೌಡರು ಗೆದ್ದರೂ ಹಿಂದಿನ ಚುನಾವಣೆಯಲ್ಲಿ ಪಡೆದ ಲೀಡ್ಪ್‌ಡೆಯಲು ಕಷ್ಟಕರ. ಗೆದ್ದರೇ 1 ಲಕ್ಷದಿಂದ 1.50 ಲಕ್ಷಲೀಡ್‌ನಲ್ಲಿ ಗೌಡರು ಗೆಲ್ಲಬಹುದು ಎಂಬುದು ಜೆಡಿಎಸ್ ವಾದವಾಗಿದ್ದರೆ, ಕಾಂಗ್ರೆಸಿಗರು, ಜಯ ನಮ್ಮದೇ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಉಪ ಸಂಹಾರ: ಹಾಸನ ಲೋಕಸಭೆಯ ಒಟ್ಟು 15,59,655 ಮತದಾರರ ಪೈಕಿ 11,46,354 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 7,88,609 ಪುರುಷ ಮತದಾರರ ಪೈಕಿ 5,85,669 ಮಂದಿ ಮತದಾನ ಮಾಡಿದ್ದಾರೆ. 7,71,258 ಮಂದಿ ಮಹಿಳಾ ಮತದಾರರ ಪೈಕಿ 5,60,681 ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ.


ಮುಲಾಯಂ-ಯಚೂರಿ ಜೊತೆ ಮಾತುಕತೆ
ಇದಕ್ಕೆ ಇಂಬು ನೀಡುವಂತೆ ಗುರುವಾರ ದೇವೇಗೌಡರೊಂದಿಗೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್, ಸಿಪಿಎಂ ಮುಖಂಡ ಸೀತಾರಾಂ ಯಚೂರಿ, ಪ್ರಕಾಶ್‌ಕಾರಟ್ ಅವರೊಂದಿಗೆ ಮಾತುಕತೆ ನಡೆಸಿ, ತೃತೀಯ ರಂಗದ ಪರ ಫಲಿತಾಂಶ ವಾಲಿದರೆ, ಹೇಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.


ಎ.ಮಂಜು ಸಚಿವರ ದಂಡು ಪ್ರಚಾರ
ಹಾಸನ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಮುಖ್ಯಮಂತ್ರಿ ಸಿದ್ದರಾಮಯ್ಯ  2 ಬಾರಿ ಜಿಲ್ಲೆಗೆ ಬಂದು ಪ್ರಚಾರ ಮಾಡಿದ್ದರು. ಜೊತೆಗೆ ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಸಿ.ಎಂ. ಇಬ್ರಾಹಿಂ, ಕೇಂದ್ರ ಸಚಿವ ರೆಹಮಾನ್ ಖಾನ್, ರಾಜ್ಯ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್, ರೋಷನ್ ಬೇಗ್, ಯು.ಟಿ. ಖಾದರ್, ಎಚ್. ಎಸ್. ಮಹಾದೇವಪ್ರಸಾದ್, ಡಿ.ಕೆ. ಶಿವಕುಮಾರ್, ಎಚ್.ಎಂ. ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಮಾಜಿ ಸಚಿವೆ ಮೋಟಮ್ಮ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಚಿತ್ರನಟಿ ಭವ್ಯ ಕೂಡ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಹೀಗೆ ಸಿಎಂ, ಕೇಂದ್ರ, ರಾಜ್ಯದ ಹಾಲಿ ಮತ್ತು ಮಾಜಿ ಸಚಿವರು ಜಿಲ್ಲೆಗೆ ಆಗಮಿಸಿ ಗೌಡರನ್ನು ಸೋಲಿಸುವುದನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.


ಫಲಿತಾಂಶ ಏನು?
ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದವರು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿಜಯಶಂಕರ್ ಒಲ್ಲದ ಮನಸಿನಿಂದ ನಿಂತಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪರ್ಧೆಒಡ್ಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಫಲಿತಾಂಶದ ಚರ್ಚೆ ಗೌಡರು ಮತ್ತು ಮಂಜು ನಡುವಿನ ಸೋಲು-ಗೆಲವಿನ ಬಗ್ಗೆಯೇ ಚರ್ಚೆ ಆಗುತ್ತದೆ.


ಕೆಪಿಸಿಸಿ ಅಧ್ಯಕ್ಷರ ಟಾರ್ಗೆಟ್ ಕೈಗೂಡುವುದೇ?
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮುಂದಿನ ನಮ್ಮ ಟಾರ್ಗೆಟ್ ಹಾಸನ ಎಂದಿದ್ದರು. ಈ ಟಾರ್ಗೆಟ್ ಸಕ್ಸಸ್ ಆಗುವುದೇ, ಇಲ್ಲವೇ ಎಂಬುದು ಇಂದು ಗೊತ್ತಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement