ವಿದ್ಯುತ್ ಅವಘಡ: ಮಹಿಳೆ ಸಾವು
ಜಾವಗಲ್: ವಿದ್ಯುತ್ ಸ್ಪರ್ಶದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಿರ್ಮಲಾ (30) ಮೃತ ದುರ್ದೈವಿ. ಬಟ್ಟೆ ಒಣಹಾಕಲು ಹೋದಾಗ ಮನೆಯ ಪಕ್ಕದ ಮನೆಯಾದ ಶಿವಯ್ಯ ಬಾವಿಗೆ ಎಳೆದಿರುವ 4 ತಂತಿ ಲೈನ್ ಒಂದು ತಂತಿ ಹರಿದು ಮುಳ್ಳು ತಂತಿಯ ಮೇಲೆ ಬಿದಿದ್ದು, ನಿರ್ಮಲಾ ಅವರಿಗೆ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತಳ ಪತಿ ಸೋಮಶೇಖರ್ ಜಾವಗಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ: ವ್ಯಕ್ತಿ ಬಂಧನ
ಜಾವಗಲ್: ಹೋಬಳಿಯ ದೇಶಾಣಿ ರಸ್ತೆಯ ಗೇರುಮರದ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ನಡೆದಿದೆ. ಹಾರನಹಳ್ಳಿ ಗ್ರಾಮದ ಬೀರಪ್ಪ (45) ಎಂಬವರೇ ಬಂಧಿತ ಆರೋಪಿ. ಮಾರಾಟಕ್ಕಿಟ್ಟಿದ್ದ ರು. 400 ಮೌಲ್ಯದ 180 ಎಂಎಲ್‌ನ ನಂ-01 ಹೈವೇ ವಿಸ್ಕಿಯ 10 ಬಾಟಲಿಗಳನ್ನು ವಶಪಡಿಸಿಕೊಂಡಿರುವ ಜಾವಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ನಾಪತ್ತೆ
ಜಾವಗಲ್: ಹೋಬಳಿಯ ಬೆಳುವಳ್ಳಿ ಗ್ರಾಮದ ಬಸಲಿಂಗಪ್ಪ ಎಂಬುವರ ಪುತ್ರಿ ಪಾವನ (20) ಚೆಲುವನಹಳ್ಳಿ ಗ್ರಾಮದ ದೊಡ್ಡಮ್ಮನ ಮೆನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5 ಅಡಿ ಎತ್ತರ, ಗೋಧಿ ಬಣ್ಣ, ಕೋಲುಮುಖ ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪುಕಪ್ಪು ಮಿಶ್ರಿತ ಚೂಡಿದಾರ ಧರಿಸಿದ್ದರು ಎಂದು ಆಕೆಯ ತಂದೆ ಬಸವಲಿಂಗಪ್ಪ ಜಾವಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.