'ಶೈಕ್ಷಣಿಕ ಜೀವನದಲ್ಲಿ ಸಾರ್ಥಕತೆ ಇರಲಿ'
ಹೊಳೆನರಸೀಪುರ: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ, ನೈತಿಕ ನೆಲೆಗಟ್ಟಿನ ಮೇಲೆ ತಮ್ಮ ಶೈಕ್ಷಣಿಕ ಜೀವನವನ್ನು ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆಸುವಂತೆ ತಾಲೂಕಿನ ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಎಸ್. ಸಂಪತ್‌ಕುಮಾರ್ ಕಿವಿಮಾತು ಹೇಳಿದರು.
ಕಾಲೇಜಿನ 2013-14ನೇ ಸಾಲಿನ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ, ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ಷಣಿಕ ಸುಖದ ಬಿಸಿಲು ಕುದುರೆ ಬೆನ್ನೇರಿ ಸವಾರಿ ಮಾಡುವ ಹಂಬಲವನ್ನು ಬಿಟ್ಟು, ನಿಮ್ಮ ಗುರಿ, ಮುಂದಿನ ಸವಾಲುಗಳ ಕಡೆಗೆ ದೃಢ ಹೆಜ್ಜೆಗಳನ್ನಿಡುವ ನಿಟ್ಟಿನಲ್ಲಿ ವಾಸ್ತವಿಕತೆಗೆ ಹೆಚ್ಚಿನ ಬೆಲೆ ಕೊಟ್ಟು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಬೋರಯ್ಯ ಮಾತನಾಡಿ, ಪ್ರತಿಯೊಬ್ಬ ತಂದೆ ತಾಯಿಗಳಿಗೂ ಎಲ್ಲಕ್ಕಿಂತ ಮಿಗಿಲಾದ ಆಸ್ತಿ ಎಂದರೆ ತಮ್ಮ ಮಕ್ಕಳು, ಆದ್ದರಿಂದ ಪ್ರತಿ ವಿದ್ಯಾರ್ಥಿಯೂ ಏನಾದರೂ ಸಾಧನೆ ಮಾಡಿ ತಮ್ಮ ಪೋಷಕರ ಆಸೆ ಆಕಾಂಕ್ಷೆಈ ಡೇರಿಸುವ ಮೂಲಕ ಅವರ ಮತ್ತು ಸಮಾಜದ ಋಣ ತೀರಸಬೇಕಾದ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆ ಕಿವಿಮಾತು ಹೇಳಿದರು.
ಕಾಲೇಜಿನ ಗ್ರಂಥಪಾಲಕರಾದ ಎಂ.ಸಿ.ವಿನೋದ್‌ಕುಮಾರ್ ಮತ್ತಿತರರು ಮಾತನಾಡಿದರು. ಎನ್.ಎಂ.ಜಗದೀಶ್ ರಾಜ್ಯಶಾಸ್ತ್ರ ವಿಷಯದಲ್ಲಿ ಮೈಸೂರು ವಿ.ವಿಯಲ್ಲಿ 2011-12ನೇ ಸಾಲಿನಲ್ಲಿ ಬಂಗಾರದ ಪದಕ ಪಡೆದ ಹಿನ್ನೆಲೆಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗಗಳಿಂದ ನಗದು ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ಹೆಚ್ಚಿನ ಅಂಕ ಪಡೆದ ಬಿಎ ಮತ್ತು ಬಿಬಿಎಂ ವಿದ್ಯಾರ್ಥಿಗಳಾದ ಎಚ್.ಆರ್.ರಂಜಿತ, ಶಿವಮ್ಮ, ಕೆ.ಆರ್.ಪ್ರಸನ್ನ, ಇಂದ್ರಾಣಿ. ಮೇ ಜೂನ್ 2012 ಸಾಲಿನ ಎ. ಫಯಾಜ್, ಎನ್.ಎಂ.ಜಗದೀಶ್, ಎಚ್.ಎಸ್.ಶಿಲ್ಪ ಅವರಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.