ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ: ಶಿವರಾಜ್
ಸಕಲೇಶಪುರ: ರಸಗೊಬ್ಬರದ ಮೇಲೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿದರೆ ಅಂತಹ ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಕೃಷಿ ನಿರ್ದೇಶಕ ಶಿವರಾಜ್ ಎಚ್ಚರಿಕೆ ಡೀದ್ದಾರೆ.
ಪಟ್ಟಣದ ಕೃಷಿ ಇಲಾಖೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ಮಾರಾಟಗಾರರಿಗೆ ಇರುವ ಸರ್ಕಾರಿ ನೀತಿ ನಿಯಮಗಳ ಬಗ್ಗೆ ತಿಳಿಸಿದರು.
ದರ ವಿವರ ಪ್ರದರ್ಶನ ಕಡ್ಡಾಯ: ಅಧಿಕೃತ ಉತ್ಪಾದಕರು ನೀಡಿರುವ ಪ್ರಮಾಣ ಪತ್ರವಿಲ್ಲದೆ ಗೊಬ್ಬರ ಮಾರಾಟಗಾರರು ಗೊಬ್ಬರ ಮಾರಲು ಅನುಮತಿ ಇಲ್ಲ, ಮಾರಾಟ ಮಳಿಗೆಯಲ್ಲಿ ರಸಗೊಬ್ಬರಗಳ ದಾಸ್ತಾನು ಮತ್ತು ಮಾರಾಟದ ದರ ವಿವರ ಪ್ರದರ್ಶಿಸಬೇಕು, ರಸಗೊಬ್ಬರ ಕೊಳ್ಳುವ ರೈತರಿಗೆ ಕಡ್ಡಾಯವಾಗಿ ಬಿಲ್ ಕೊಡಬೇಕು, ಪರವನಾಗಿ ನಮೂದಿಸಿದ ಸ್ಥಳ ಬಿಟ್ಟು ಬೇರೆಡೆ ರಸಗೊಬ್ಬರ ದಾಸ್ತಾನು ಹಾಗೂ ವಹಿವಾಟು ನಡೆಸುವ ಹಾಗೇ ಇಲ್ಲ, ಅಧಿಕಾರಿಗಳು ಮಾರಾಟ ಮಳಿಗೆಗೆ ಭೇಟಿ ನೀಡಿದಾಗ ತಪಾಸಣೆಗೆ ಸಹಕಾರ ನೀಡಬೇಕು, ರಸಗೊಬ್ಬರ ಮಾರಾಟ ಹಾಗೂ ದಾಸ್ತಾನು ಬಗ್ಗೆ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ಕಠಿಣ ಕ್ರಮದ ಎಚ್ಚರಿಕೆ: ಗುಣಮಟ್ಟದ ರಸಗೊಬ್ಬರ ನೀಡಬೇಕು ಹಾಗೂ ಕಾಲಾವಧಿ ಮೀರಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡಬಾರದು.ಒಂದು ವೇಳೆ ಈ ನಿಯಮಗಳನ್ನು ಮೀರಿ ರೈತರಿಗೆ ಮೋಸವಾಗುವುದು ಕಂಡರೆ ಅಂತಹ ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಬಾರಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗೊಬ್ಬರದ ದಾಸ್ತಾನು ಮಾಡಲಾಗುವುದು. ಇದರಿಂದ ರೈತರಿಗೆ ಬೇಕಾದಷ್ಟು ಪ್ರಮಾಣದ ಗೊಬ್ಬರ ಸಿಗುವಂತೆ ಮಾಡಲಾಗುವುದು ಹಾಗೂ ಗೊಬ್ಬರದಲ್ಲಿ ರೈತರು ಎಲ್ಲಾ ಕಂಪನಿಗಳ ಬ್ರಾಂಡ್‌ಗಳನ್ನು ಬಹುತೇಕ ಉಪಯೋಗಿಸುವುದರಿಂದ ಮಾರುಕಟ್ಟೆಯಲ್ಲಿ ಕೇವಲ ಒಂದೇ ಓಂದು ಕಂಪನಿಯ ಬ್ರಾಂಡನ್ನು ಸೃಷ್ಟಿ ಮಾಡಿ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ನೋಡಿಕೊಳ್ಳುವುದು ಗೊಬ್ಬರ ಮಾರಾಟಗಾರರು ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಯೋಗೇಶ್, ಗೊಬ್ಬರ ಮಾರಾಟಗಾರರ ಸಂಘದ ಶಶಿಧರ್ ಇದ್ದರು.