ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುಟ್ಟ ಭಂಡ; ಕೇಶಮುಂಡ...

Rashmi Kasaragodu
Updated On : 16 May 2014, 11:36 am

ಹೊಳೆನರಸೀಪುರ: ಕಾಂಗ್ರೆಸ್ ನಾಯಕರ ಸೋಲಿನಿಂದ ಮನನೊಂದ ಇಲ್ಲಿನ ಕಾಂಗ್ರೆಸ್‌ನ ಕಟ್ಟಾ ಅಭಿಮಾನಿಯೊಬ್ಬ ಪಟ್ಟಣದ ಹೃದಯ ಭಾಗದಲ್ಲಿನ ಗಾಂಧಿ ಪ್ರತಿಮೆ ಎದುರು ಕುಳಿತು ಕೇಶಮುಂಡನ ಮಾಡಿಸಿಕೊಂಡ ಘಟನೆ ಶುಕ್ರವಾರ ನಡೆಯಿತು.  
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಹರದನಹಳ್ಳಿ ಪುಟ್ಟರಾಜು(ಗಂಧ ಪುಟ್ಟರಾಜ) ಸಾರ್ವಜನಿಕ ಸ್ಥಳದಲ್ಲಿ ಕೇಶಮುಂಡನ ಮಾಡಿಸಿಕೊಂಡಿದ್ದಲ್ಲದೆ, ತನ್ನ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ತನ್ನ ನೆಚ್ಚಿನ ನಾಯಕ, ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಗೂ ಹಾಸನ ಅಭ್ಯರ್ಥಿ ಎ.ಮಂಜು ಸೋಲಿನಿಂದ ಭ್ರಮನಿರಸನಗೊಂಡ ಪುಟ್ಟರಾಜು ಪಟ್ಟಣದ ಗಾಂಧಿ ವೃತ್ತದಲ್ಲಿ ಕುಳಿತು ಸಾರ್ವಜನಿಕವಾಗಿ ಕೇಶಮುಂಡನ ಮಾಡಿಸಿಕೊಂಡರು.
ಹಣೆಗೆ ಗಂಧ ಹಚ್ಚದೇ ಮನೆಯಿಂದ ಹೊರಗೆ ಬರದ ಕಾರಣದಿಂದಾಗಿಯೇ ಇಡೀ ತಾಲೂಕಿನಾದ್ಯಂತ ಗಂಧ ಪುಟ್ಟರಾಜು ಎಂದೇ ಕರೆಸಿಕೊಳ್ಳುತ್ತಿದ್ದರು.
ಇಂತಹ  ಪುಟ್ಟರಾಜು ತನ್ನ ನೆಚ್ಚಿನ ನಾಯಕ ಎಚ್.ವಿಶ್ವನಾಥ್ ಗೆಲ್ಲುವವರೆಗೆ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವವರೆಗೂ ತನ್ನ ಹಣೆಗೆ ಗಂಧ ಹಚ್ಚುವುದಿಲ್ಲ ಎಂದು ಗಾಂಧಿ ಪ್ರತಿಮೆ ಎದುರು ಶಪಥ ಮಾಡಿದ್ದರು.
 ಅಲ್ಲದೆ, ದೇಶಾದ್ಯಂತ ಕಾಂಗ್ರೆಸ್ ಹೀನಾಯ ಫಲಿತಾಂಶದಿಂದಲೂ ಮನನೊಂದು, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ ಅವರು, ತನ್ನ ರಾಜಿನಾಮೆ ಪತ್ರವನ್ನು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಸಿ.ವೇಣುಗೋಪಾಲ್‌ಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement