'ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ'
ಹಾಸನ: ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ, ಅವರು ಇಡೀ ಭಾರತಕ್ಕೇ ಬೇಕಾದವರು ಎಂದು ಸಹ ಪ್ರಾಧ್ಯಾಪಕ ಟಿ.ಪಿ.ಪುಟ್ಟರಾಜು ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಹಿಂದೂ ಧರ್ಮದ ಕಂದಾಚಾರಗಳಿಂದ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದರು. ಭಾರತಕ್ಕೆ ಅತ್ಯುತ್ತಮ ಸಂವಿಧಾನ ರೂಪಿಸಿ ದಲಿತರು, ಮಹಿಳೆಯರು, ಕಾರ್ಮಿಕರು ಹಾಗೂ ವಿಕಲಚೇತನರಿಗೆ ಕಾನೂನು ಬದ್ಧ ಆಶ್ರಯ ಒದಗಿಸಿದ್ದಾರೆ ಎಂದರು. ಪ್ರೊ.ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಆಚರಣೆಗಳು ಕೇವಲ ಸಾಂಕೇತಿಕವಾಗಿರಬಾರದು. ವಿಶಾಲ ಮನೋಭಾವದಿಂದ ಅಂಬೇಡ್ಕರ್ ವಿಚಾರಗಳನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಾದ ದೊರೆಸ್ವಾಮಿ, ರಾಮ್‌ಕುಮಾರ್, ಅಂಬೇಡ್ಕರ್ ವಿಚಾರ ತತ್ವಗಳ ಬಗ್ಗೆ ಮಾತನಾಡಿ ಪ್ರಬಂಧ ಮಂಡಿಸಿದರು.