ಧನದಾಹಿ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿ, ಕನ್ನಡಪರ ಹೋರಾಟ ಬೆಂಬಲಿಸಿ
ಹಾಸನ: ಕನ್ನಡ ಭಾಷೆಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿದೆ. ರಾಜರ ಕಾಲದಲ್ಲಿ ಪುರೋಹಿತಶಾಹಿ ಹಾಗೂ ಆಳರಸರ ಹೆಚ್ಚುಗಾರಿಕೆಯ ಫಲವಾಗಿ ಅವರ ಆಡಳಿತ ಭಾಷೆಯಾಗಿ ಸಂಸ್ಕೃತ ಭಾರತದ ನೆಲದ ಭಾಷೆಗಳ ಮೇಲೆ ದುರಾಕ್ರಮಣ ಮಾಡಲಾರಂಭಿಸಿತು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ವಿಷಾದಿಸಿದರು.
ಕನ್ನಡ ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಧ್ಯಯನ ವೃತ್ತ ಆಯೋಜಿಸಿದ್ದ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, '37ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಕನ್ನಡ ಪ್ರಥಮ ಭಾಷೆಯಾಗ ಬೇಕು ಎಂದು ಹಕ್ಕೊತ್ತಾಯ ಮಾಡಿದ್ದರು. 1976ರಲ್ಲಿ ನಡೆದ 46ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದನ್ನು ಪ್ರಬಲವಾಗಿ ಅನುಮೋದಿಸಲಾಯಿತು. ಅದರಂತೆ 1979ರಲ್ಲಿ ಕನ್ನಡ ಮೊದಲ ಭಾಷೆಯಾಗಿ ಸಂಸ್ಕೃತ ಮೂರನೆ ಭಾಷೆಯಾಗಿ ಕಲಿಸಲು ಪ್ರಾರಂಭಿಸಲಾಯಿತು. ಇದರ ವಿರುದ್ಧ ಸಂಸ್ಕೃತಪ್ರಿಯರು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಅದೇ ಸಂದರ್ಭದಲ್ಲಿ ಗೋಕಾಕ್ ಚಳವಳಿ ಕೂಡಾ ನಡೆಯಿತು. ಭಾರತ ದೇಶ ಶಿಕ್ಷಣದ ಕುರಿತು ಸಮಗ್ರ ನೀತಿ ರೂಪಿಸದೇ ಇದ್ದುದರಿಂದ ಈಗ ಸಂಸ್ಕೃತದ ಜಾಗದಲ್ಲಿ ಇಂಗ್ಲಿಷ್ನ ದಬ್ಬಾಳಿಕೆ ನಡೆಯುತ್ತಿದೆ' ಎಂದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಮಿಕ ಮುಖಂಡ ಧರ್ಮೇಶ್, ನಮ್ಮ ಭಾಷೆಯನ್ನು ನಾವು ಒತ್ತಾಯಪೂರ್ವಕವಾಗಿ ಕಲಿಯುವಂತಾಗಿದೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವು ಮಾರುಕಟ್ಟೆ ಅವಲಂಬಿತ ಬದುಕು ಸಾಗಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಬೆಲೆ ಇಲ್ಲ, ಅದು ಉದ್ಯೋಗ ಸೃಷ್ಟಿಸುವುದಿಲ್ಲ. ಇದರ ನೇರ ಹೊಣೆಗಾರಿಕೆ ಸರ್ಕಾರ ಮತ್ತು ವ್ಯವಸ್ಥೆಯ ಮೇಲಿದೆ ಎಂದು ಹೇಳಿದರು.
ಸಾಹಿತಿ ಮತ್ತು ಶಿಕ್ಷಕ ಚಂದ್ರಕಾಂತ ಪಡೆಸೂರ್ ಮಾತನಾಡಿ, 'ಸರ್ಕಾರಕ್ಕೆ ಕನ್ನಡ ಮಾಧ್ಯಮದಲ್ಲಿ ಶಾಲೆತರೆಯಲು ಮುಚ್ಚಳಿಕೆ ಬರೆದುಕೊಟ್ಟು, ಇಂಗ್ಲಿಷ್ನಲ್ಲಿ ಶಾಲೆ ನಡೆಸುತ್ತಿರುವ ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಯವರು ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದ್ದಾರೆ ಎಂದು ಹೇಳಿದರು. ಉಪನ್ಯಾಸಕ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ, ಗೊರೂರು ಶಿವೇಶ್, ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಅಹಮ್ಮದ್, ಕಸಾಪಾ ಮಾಜಿ ಅಧ್ಯಕ್ಷ ಬಿ.ಎನ್.ರಾಮಸ್ವಾಮಿ, ಸಮತ ಜಿಲ್ಲಾ ಸಂಚಾಲಕಿ ಮಮತ ಶಿವು, ಅರಕೂಲಗೂಡು ವಕೀಲ ಬಿಜಿವಿಎಸ್ ಕಾರ್ಯದರ್ಶಿ ಲಕ್ಷ್ಮೀಶ್ ತಮ್ಮ ವಿಚಾರವನ್ನು ಮಂಡಿಸಿದರು. ಅಧ್ಯಯನ ವೃತ್ತದ ಸಂಚಾಲಕ ಕಿಶೋರ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಚರ್ಚೆಯಲ್ಲಿ ಹಲವು ಸಂಘಟನೆಗಳ ಪ್ರತಿನಿಧಿಗಳು, ಹೋರಾಟಗಾರರು, ಸಾಹಿತಿಗಳು ಭಾಗವಹಿಸಿದ್ದರು.