ಬಿತ್ತನೆ ಮುನ್ನ ಮಣ್ಣು ಪರೀಕ್ಷೆ ಕಡ್ಡಾಯ
ಹೊಳೆನರಸೀಪುರ: ರೈತರು ಜಮೀನಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ ಅದರ ವಿಶ್ಲೇಷಣಾ ಫಲಿತಾಂಶದ ಆಧಾರದ ಮೇಲೆ ಸೂಕ್ತ ರಸಗೊಬ್ಬರ ಹಾಗೂ ಸಾವಯವ ಗೊಬ್ಬರ ಒದಗಿಸಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಮಣ್ಣು ಆರೋಗ್ಯ ಕೇಂದ್ರದ ಕೃಷಿ ಅಧಿಕಾರಿ ನಾಗಮಣಿ ಹೇಳಿದರು. ಕೃಷಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಮೂರೂ ಹೋಬಳಿಯ ಕೆಲ ರೈತರ ಜಮೀನಿನ ಮಣ್ಣು ಮಾದರಿಯ ಸಂಗ್ರಹಣಾ ಆಂದೋಲನದಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿರುವ ಮಣ್ಣು ಆರೋಗ್ಯ ಕೇಂದ್ರದಲ್ಲಿ ವಿವಿಧ ಪೋಷಕಾಂಶಗಳು, ಸಾವಯವ ಇಂಗಾಲ, ಮಣ್ಣಿನ ರಸಸಾರ, ಲವಣಾಂಶಗಳ ವಿಶ್ಲೇಷಣೆ ನಡೆಸಲಾಗುವುದು ಎಂದರು. ರೈತರು ಕೃಷಿ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಿದಲ್ಲಿ ಅದನ್ನು ವಿಶ್ಲೇಷಿಸಿ ಮಣ್ಣು ಆರೋಗ್ಯ ಚೀಟಿಗಳನ್ನು ಮುದ್ರಿಸಿ ಸಂಬಂಧಪಟ್ಟ ರೈತರಿಗೆ ವಿತರಿಸಲಾಗುವುದು ಎಂದರು.