ಬುದ್ಧ ಪೂರ್ಣಿಮೆ: ಮೊಂಬತ್ತಿ ಮೆರವಣಿಗೆ
ಬೇಲೂರು: ಭಾರತದಲ್ಲಿ ಜನ್ಮತಾಳಿದ ಬೌದ್ಧಧರ್ಮ ಇತರೆ ದೇಶಗಳು ಅನುಸರಿಸಿ ಅಭಿವೃದ್ಧಿ ಹೊಂದಿವೆ. ಆದರೆ, ನಮ್ಮ ದೇಶ ಮಾತ್ರ ಇನ್ನೂ ಬೌದ್ಧ ಧರ್ಮ ಅನುಸರಿಸುವಲ್ಲಿ ಹಿಂದೆ ಬಿದ್ದಿರುವುದರಿಂದ ಅಭಿವೃದ್ಧಿ ಪಥದಲ್ಲಿ ಕೂಡ ಹಿಂದೆ ಉಳಿದಿದೆ ಎಂದು ವಕೀಲ ಗಂಗಾಧರ್ ಬಹುಜನ್ ಅಭಿಪ್ರಾಯಪಟ್ಟರು.
2558ನೇ ಬುದ್ದ ಜಯಂತಿಯ ಅಂಗವಾಗಿ ಪ್ರಗತಿಪರ ದಲಿತ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಉದ್ದೇಶಿಸಿ ಅವರು ಮಾತನಾಡಿದರು.
ಬುದ್ಧನ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ. ಈ ಧರ್ಮದ ಅಡಿಪಾಯವನ್ನು ಅರಿಯಲು ಅದರ ಆಳಕ್ಕೆ ಇಳಿದು ನೋಡಬೇಕಿದೆ. ಜಗತ್ತಿನ ಎಲ್ಲಾ ಧರ್ಮಗಳು ಮನುಷ್ಯ ಹಾಗೂ ದೇವರ ಸಂಬಂಧದ ಕುರಿತು ಹೇಳುತ್ತವೆ. ಆದರೆ, ಬೌದ್ಧ ಧರ್ಮ ದೇವರು ಹಾಗೂ ಆತ್ಮದ ಕುರಿತು ಮಾತನಾಡುವುದಿಲ್ಲ. ಬದಲಿಗೆ, ದುಃಖ ನಿವಾರಿಸುವ ವೈಚಾರಿಕ ಮಾರ್ಗವನ್ನೇ ಧರ್ಮದ ಅಡಿಪಾಯ ಎಂದು ತಿಳಿಸಲಾಗಿದೆ ಎಂದರು.
ಬೌದ್ಧ ಧರ್ಮದ ತತ್ವಗಳನ್ನು ಅಳವಡಿಸಿಕೊಂಡು ಶಾಂತಿ ಕಾಪಾಡಲು ಸಾಧ್ಯ ಎಂಬುದಕ್ಕೆ ಸಾಮ್ರಾಟ್ ಅಶೋಕ್ ಅವರ ಆಡಳಿತವೆ ಸಾಕ್ಷಿ. ಮಾನವ ಸಂಕುಲದ ಒಳಿತಿಗಾಗಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ಬೌದ್ದಧರ್ಮ ಸ್ವೀಕರಿಸಿದರು. ಅವರ ಅನುಯಾಯಿಗಳಾದ ನಾವು ಬೌದ್ಧ ಧರ್ಮ ಅನುಸರಿಸಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ನೆಹರು ನಗರದಿಂದ ಡಾ.ಅಂಬೇಡ್ಕರ್ ಪ್ರತಿಮೆಯವರೆಗೆ ಮೇಣದ ಬತ್ತಿ ದೀಪದ ಮೆರವಣಿಗೆ ನಡೆಸಿದರು.
ಬೌದ್ದ ಮಹಾಸಭಾದ ನಿಂಗರಾಜು, ರಾಹುಲ್, ದಲಿತ ಸಂಘಟನೆಗಳ ಮುಖಂಡರಾದ ಯೋಗೀಶ್, ಬಿ.ಎಲ್.ಲಕ್ಷ್ಮಣ್. ವಕೀಲರಾದ ರಾಜು, ಕುಮಾರ್. ಹಾಗೂ ಮೊಗಸಾವರ ಮಂಜುನಾಥ್, ಕಾಳರಾಜು. ಶೇಷಪ್ಪ, ಮಲ್ಲೇಶ್, ನಾಗರಾಜು. ದ್ಯಾವಯ್ಯ ಹಾಗೂ ಹಲವಾರು ಬುದ್ದರ ಅನುಯಾಯಿಗಳು ಇದ್ದರು.