ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ ಕೊಬ್ಬರಿ; ಬೆಲೆ ಬರೋಬ್ಬರಿ

Vishwanath S
Updated On : 19 May 2014, 12:42 pm

ಅರಸೀಕೆರೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಕೊಬ್ಬರಿ ಹರಾಜುನಲ್ಲಿ ಕ್ವಿಂಟಲ್ ಕೊಬ್ಬರಿ ಧಾರಣೆ ರು.12,025 ಏರಿಕೆಯಾಗುವ ಮೂಲಕ ಮಾರುಕಟ್ಟೆ ಇತಿಹಾಸದಲ್ಲಿಯೇ ನೂತನ ದಾಖಲೆ ನಿರ್ಮಿಸಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿ ರು.11.700 ಗೆ  ಟೆಂಡರ್ ಪ್ರಕ್ರಿಯೆ ನಡೆಯುವ ಮೂಲಕ ನೂತನ ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಮೇ.16 ರಂದು ಮಾರುಕಟ್ಟೆಯಲ್ಲಿ ನಡೆದ ಕೊಬ್ಬರಿ ಹರಾಜಿನಲ್ಲಿ ಪ್ರತಿ ಕ್ವಿಂಟಲ್‌ಗೆ  ರು.11.100 ರಿಂದ 12.025ಗೆ  ಟೆಂಡರ್ ಹರಾಜು ಪ್ರಕ್ರಿಯೆ ನಡೆದು ಅನೇಕ ವರ್ಷಗಳ ದಾಖಲೆ ಮುರಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ತಾಲೂಕಿನಲ್ಲಿ ತೀವ್ರ ಬರಗಾಲ, ಮಳೆಯ ಅಭಾವ, ತೇವಾಂಶ ಕೊರತೆ ಹಾಗೂ ತೆಂಗಿನಮರಗಳಿಗೆ ತಗುಲಿದ ಅನೇಕ ರೋಗಗಳ ಭಾದೆಯಿಂದ ತೆಂಗು ಬೆಳೆ ನಾಶದ ಹಂಚಿಗೆ ತಲುಪಿ ಈಗಾಗಲೇ 8 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ಸಂಪೂರ್ಣ ನಾಶವಾಗಿರುವ ಕಾರಣ ಇಳುವರಿ ಪ್ರಮಾಣ ಹಂತ ಹಂತದಲ್ಲಿ ಕುಸಿಯುತ್ತಿದ್ದು, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಕೊಬ್ಬರಿ ರವಾನೆ ಆಗದೆ ಮಾರುಕಟ್ಟೆಯಲ್ಲಿ ಬೇಡಿಕೆ ಉಂಟಾಗಿದೆ.
ಬೇಡಿಕೆ ಪ್ರಮಾಣ ಹೆಚ್ಚಳ: ದೈನಂದಿನ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆಗೂ ಬೇಡಿಕೆಯಿದ್ದು, ಧಾರಣೆಯಲ್ಲಿ ಹೆಚ್ಚಳ ಉಂಟಾಗುತ್ತಿರುವ ಕಾರಣ ಪಕ್ಕದ ನೆರೆ ಹೊರೆಯ ರಾಜ್ಯಗಳಲ್ಲೂ ಕೊಬ್ಬರಿಗೆ ಇನ್ನಿಲ್ಲದ ಬೇಡಿಕೆ ಪ್ರಮಾಣ ಹೆಚ್ಚಾಗಿ ಬೆಲೆಯಲ್ಲಿ ಜಿಗಿತ ಕಂಡಿದೆ ಎನ್ನಲಾಗುತ್ತಿದೆ. ಇನ್ನೂ ಎರಡು ಮೂರು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯ ಪ್ರಮಾಣ ತೀವ್ರವಾಗಿ ಧಾರಣೆ ಹೆಚ್ಚಳವಾಗಲಿದೆ ಎನ್ನುವ ಅಭಿಪ್ರಾಯ ವರ್ತಕ ಸಮುದಾಯದಲ್ಲಿ ವ್ಯಕ್ತವಾಗುತ್ತಿದೆ.
ತಾಲೂಕಿನಾದ್ಯಂತ ತೀವ್ರ ಬರಗಾಲ ಉಂಟಾಗಿ ಸುಮಾರು ರು. 8 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ನಾಶಗೊಂಡಿದ್ದು, ಇನ್ನುಳಿದಿರುವ ಅಲ್ಪ-ಸ್ವಲ್ಪ ಮರಗಳಿಗೆ ತೇವಾಂಶ ಕೊರತೆ ಮತ್ತು ರೋಗಗಳ ಬಾಧೆಗಳು ಕಾಡುತ್ತಿದೆ. ಅಲ್ಲದೆ ಮರಗಳಲ್ಲಿ ಕಾಯಿಗಳೂ ಕೂಡ ಕಟ್ಟುತ್ತಿಲ್ಲ ಇದರಿಂದಾಗಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಸಹಜವಾಗಿ ಬೇಡಿಕೆಯಿದ್ದು, ಪಂಜಾಬ್, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ಇಲ್ಲಿಂದಲ್ಲೇ ಕೊಬ್ಬರಿ ರವಾನೆ ಆಗುತ್ತಿದ್ದು, ನಿರೀಕ್ಷೆಗಿಂತ ಬೇಡಿಕೆಯ ಪ್ರಮಾಣ ಹೆಚ್ಚಿರುವ ಪರಿಣಾಮ ರೈತರಿಗೆ ಬಂಪರ್ ಬೆಲೆ ದೊರೆಯುವಂತಾಗಿದೆ.
ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಈ ಸಂಬಂಧ ಪ್ರತಿಕ್ರಿಯೆ ನೀಡಿ, ಇತ್ತೀಚೆಗೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರ ಬೇಡಿಕೆಗೆ ತಕ್ಕಂತೆ ಕೊಬ್ಬರಿ ಬಾರದೆ ಇರುವುದು ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾದರೆ. ತೆಂಗಿನ ಮರಗಳಿಗೆ ತಗುಳಿರುವ ರೋಗಗಳಿಂದ ಬೆಳೆನಾಶವಾಗುತ್ತಿದ್ದು, ಇಳುವರಿ ಕುಂಠಿತವಾಗಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಮತ್ತು ತೆಂಗಿನಕಾಯಿಗಳಿಗೂ ಬೆಲೆಯಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂಬ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement