ಮಳೆ ನಿಂತರೂ ಹನಿ ನಿಂತಿಲ್ಲ...!
ಲೋಕಸಭೆ ಫಲಿತಾಂಶ ಪ್ರಕಟವಾಗಿ ಮೂರು ದಿನಗಳಾದರೂ ಫಲಿತಾಂಶದ ಬಗ್ಗೆ...
ಹಾಸನ: ಲೋಕಸಭೆ ಫಲಿತಾಂಶ ಪ್ರಕಟವಾಗಿ ಮೂರು ದಿನಗಳಾದರೂ ಫಲಿತಾಂಶದ ಬಗ್ಗೆ ವಾದ-ಚರ್ಚೆ ಮಾತ್ರ ನಿಂತಿಲ್ಲ. ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಅಂತಾರಲ್ಲಾ ಹಾಗೇ...
ರಾಜಕೀಯವನ್ನು ಹೊದ್ದು ಮಲಗುವ ಹಾಸನ ಜಿಲ್ಲೆಯಲ್ಲಿ ಮತಗಳ ಎಣಿಕೆ ಮೊದಲು ಯಾರು ಗೆಲ್ತಾರೆ.. ಸೋಲ್ತಾರೆ.... ಎಂಬ ಆಧಾರದ ಮೇಲೆ ಬೆಟ್ಟಿಂಗ್ ಕಟ್ಟುವ ಆಟವೂ ನಡೆಯಿತು. ಈಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಂತರ ಕಡಿಮೆ ಆಗಲು ಕಾರಣಗಳೇನು? ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಸೋಲಲು ಕಾರಣಗಳೇನು? ಎಂಬ ಚರ್ಚೆ ಜಿಲ್ಲಾದ್ಯಂತ ನಡೆಯುತ್ತಿದೆ.
2009ರಲ್ಲಿ ಚುನಾವಣೆಯಲ್ಲಿ ದೇವೇಗೌಡರು 2,91,113 ಮತಗಳ ಭಾರಿ ಅಂತರದಲ್ಲಿ ಗೆದ್ದಿದ್ದರೆ, 2014 ರಲ್ಲಿ 1,00,462 ಮತಗಳಿಗೆ ಕುಗ್ಗಿದೆ. ಹೀಗೇಕಾಯ್ತು ಎಂಬುದಕ್ಕೆ ರಾಜಕೀಯ ವಲಯದಲ್ಲಿ ನೀಡುತ್ತಿರುವ ಕಾರಣಗಳು ಇವು.
ಕಡಿಮೆ ಅಂತರಕ್ಕೆ ಕಾರಣ?
- ರಾಜ್ಯ ಕಾಂಗ್ರೆಸ್ ಮುಖಂಡರು ಗೌಡರನ್ನು ಸೋಲಿಸಲೇ ಬೇಕೆಂಬ ಉಮೇದಿನಲ್ಲಿ ನೀರಿನಂತೆ ಹಣ ಚೆಲ್ಲಿದ್ದು.
- ಬಿಜೆಪಿ ಕೆಲ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗೆ ಒಳಗೊಳಗೆ ಬೆಂಬಲಿಸಿದ್ದು. ಜಾತಿ ಆಧಾರದ ಮೇಲೆ ಪ್ರಚಾರ ಮಾಡಿದ್ದು.
- ಜೆಡಿಎಸ್ ಕೆಲವು ಮುಖಂಡರು ತಳಮಟ್ಟದಲ್ಲಿ ಸರಿಯಾಗಿ ಪ್ರಚಾರ ಕಾರ್ಯ ನಿರ್ವಹಿಸದೇ ಹೋದದ್ದು.
- ಗೌಡರು ಗೆದ್ದೆ ಗೆಲ್ಲುತ್ತಾರೆ ಎಂಬ ಅತೀವ ವಿಶ್ವಾಸ.
- ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಾಮಾಣಿಕರನ್ನು ಗುರುತಿಸುವಲ್ಲಿ ನಿರ್ಲಕ್ಷ್ಯ ಮಾಡಿರುವುದು.
- ಪ್ರಚಾರಕ್ಕೆ ಗುತ್ತಿಗೆದಾರರನ್ನು ಮುಂದೆ ಬಿಟ್ಟಿದ್ದು.
- ಕಾಡಾನೆ ಸಮಸ್ಯೆ, ರಸ್ತೆಗಳ ಅಭಿವೃದ್ಧಿ ಮತ್ತಿತರ ಸಮಸ್ಯೆಗಳ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಆಳುವ ಸರ್ಕಾರಗಳ ಮೇಲೆ ಒತ್ತಡ ಹೇರದೆ ಹೋದದ್ದು.
ಮುಂದೆ ಹೆಂಗೆ ಶಿವಾ...!
2004, 2009 ಮತ್ತು 2014 ರ ಲೋಕಸಭೆ ಚುನಾವಣೆಗಳಲ್ಲಿ ಸತತವಾಗಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ದೇವೇಗೌಡರು ಮುಂದೆ ಹಲವು ಸವಾಲುಗಳಿವೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ. ನಾನಾ ಕಾರಣಗಳಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದುದ್ದ-ಹಾಸನ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ. ಹಾಸನ ನದರದ ಎನ್.ಆರ್. ವೃತ್ತದಿಂದ ಹೊಸ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಸಿರುವ ರೇಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ. ರೈತರಿಗೆ ದೊರಕಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ದೊರಕಿಸುವತ್ತ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ತಡೆಗೆ ಕಡಿವಾಣ ಹಾಕಬೇಕಾಗಿದೆ. ನಗರಸಭೆಯಲ್ಲಿ ಅಧಿಕಾರಿಶಾಹಿ ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡುತ್ತಿರುವುದನ್ನು ತಡೆಗಟ್ಟಿ, ನಗರದಲ್ಲಿ ಇರುವ ನೈರ್ಮಲ್ಯ ಮತ್ತಿತರ ಕಡೆ ಗಮನಹರಿಸುವಂತೆ ಮಾಡಬೇಕಾಗಿದೆ.
ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವ ಡೊನೇಷನ್ ಭೂತ ತೊಲಗಿಸುವತ್ತವು ಚಿಂತನೆ ಮಾಡಬೇಕಾಗಿದೆ. ಕಾಡಾನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ತಡೆಗೆ ಒತ್ತು ನೀಡಬೇಕಾಗಿದೆ.
ಮಂಜು ಸೋಲಿಗೆ ಕಾರಣಗಳು ಏನು?
- ತಾವು ಶಾಸಕರಾಗಿ ಪ್ರತಿನಿಧಿಸುವ ಅರಕಲಗೂಡು ಕ್ಷೇತ್ರದಲ್ಲಿ ಜನ ಇರಲಿ, ಜಾನುವಾರುಗಳೂ ಓಡಾಡಲು ಕಷ್ಟಕರವಾಗಿರುವ ರಸ್ತೆಗಳು.
- ತಮ್ಮ ಕ್ಷೇತ್ರದ ರಸ್ತೆಗಳನ್ನೇ ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಮೇಲೆ ಜಿಲ್ಲೆಯ -ಅಭಿವೃದ್ಧಿ ಸಾಧ್ಯವೇ ಎಂಬ ಮನೋಭಾವ ಜನರಲ್ಲಿ ಉಂಟಾಗಿದ್ದು.
-ಸ್ಥಳೀಯ ಮುಖಂಡರು ತಳಮಟ್ಟಕ್ಕೆ ಹೋಗಿ ಜನರನ್ನು ಭೇಟಿ ಮಾಡದೇ ಕಾರುಬಾರು ಮಾಡಿದ್ದು.
- ಕೆಲ ಕಾಂಗ್ರೆಸ್ ಮುಖಂಡರು ಚುನಾವಣೆ ಹತ್ತಿರ ಇರುವಾಗ ಮಾಜಿ ಪ್ರಧಾನಿ ದೇವೇಗೌಡರನ್ನು ಬಹಿರಂಗ ಸಭೆಯಲ್ಲಿ ಕೊಂಡಾಡಿದ್ದು.
- ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಜನರಲ್ಲಿ ಇರುವ ಭಾವನಾತ್ಮಕ ಪ್ರೀತಿ, ಅಭಿಮಾನ ಮತ್ತು ಗೌಡರ ವೈಯಕ್ತಿಕ ವರ್ಚಸ್ಸು ಇವೆಲ್ಲವೂ ಮಂಜು ಸೋಲಿಗೆ ಕಾರಣವಾದವು.
ಗೌಡರಿಗೆ ಇದು ಕಟ್ಟಕಡೆಯ ಚುನಾವಣೆ. ಹಾಗಾಗಿ ಅನುಕಂಪ ಉಂಟಾದ ಹಿನ್ನೆಲೆಯಲ್ಲಿ ಗೌಡರು ಗೆದ್ದಿದ್ದಾರೆಯೇ ಹೊರತು, ಬೇರೆ ಯಾವ ಕಾರಣಗಳು ಇಲ್ಲ. ವಾಸ್ತವವಾಗಿ ನೋಡಿದರೇ ನನ್ನದೇ ಗೆಲವು. ಸೋತರೇ ಏನಂತೆ ಸಚಿವನಾಗಲು. ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು.
- ಎ.ಮಂಜು, ಶಾಸಕ, ಅರಕಲಗೂಡು
ಕಾಂಗ್ರೆಸಿಗರು ಅಧಿಕಾರದ ಬಲ, ಹಣವನ್ನು ಉಪಯೋಗಿಸಿದರೂ ಎಚ್.ಡಿ. ದೇವೇಗೌಡರ ಗೆಲವನ್ನು ತಡೆಯಲಾಗಿಲ್ಲ. ಈ ಕಾರಣದಿದಂದಲೇ ಅಂತರ ಕಡಿಮೆಯಾಗಿರಬಹುದು.
- ಎಚ್.ಡಿ.ರೇವಣ್ಣ, ಶಾಸಕ, ಹೊಳೆನರಸೀಪುರ
-ದಯಾಶಂಕರ ಮೈಲಿ