ರಸ್ತೆ ನೈರ್ಮಲ್ಯ ಕೊರತೆ ನೀಗಿಸಿ...
ಹೊಳೆನರಸೀಪುರ ಪಟ್ಟಣದಲ್ಲಿನ ಎಸ್ಎಲ್ಎನ್ಮಂದಿರದ ಹಿಂಭಾಗ ರಸ್ತೆಯು ಸಂಚಾರಕ್ಕೆ ಸಾಧ್ಯವಿಲ್ಲದಷ್ಟು ವಾಸನೆಯಿಂದ ಕೂಡಿದ್ದು, ಈ ರಸ್ತೆಯ ಬದಿಗಳಲ್ಲಿ ವಾಸಿಸುವ ನಾಗರಿಕರು ಇಲ್ಲಿನ ಗಲೀಜನ್ನು ಸ್ವಚ್ಛಗೊಳಿಸಿ ವಾಸಕ್ಕೆ ಅನುಕೂಲ ಕಲ್ಪಿಸಿ ಎಂದು ಇಲ್ಲಿನ ಪುರಸಭೆಗೆ ಹಲವಾರು ಬಾರಿ ಮಾಡಿರುವ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಇಡೀ ಹೊಳೆನರಸೀಪುರ ಪಟ್ಟಣದಲ್ಲಿ ಸಂಚರಿಸಲಾಗದಷ್ಟು ವಾಸನೆಯಿಂದ ತುಂಬಿರುವ ಯಾವಾಗಲೂ ಮೂಗು ಮುಚ್ಚಿಕೊಂಡೇ ಹೋಗಬೇಕಾದ ರಸ್ತೆ ಯಾವುದು ಎಂದರೆ, ಯಾರು ಬೇಕಾದರೂ ಸಲೀಸಾಗಿ ಹೇಳುವ ರಸ್ತೆಯೇ ಎಸ್ಎಲ್ಎನ್ ಚಿತ್ರಮಂದಿರದ ಹಿಂಬಾಗದ ರಸ್ತೆ ಎಂಬುದು ಇಲ್ಲಿ ಜನಜನಿತವಾಗಿದೆ.
ಪುರಸಭೆಯು ಈ ಮೊದಲು ಸಾರ್ವಜನಿಕ ಸ್ಥಳದಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸುವ ಕನಿಷ್ಠ ಕಾಳಜಿಯನ್ನೂ ತೋರದ ಕಾರಣದಿಂದಾಗಿ ಪುರಸಭೆಯ ವಾಣಿಜ್ಯ ಮಳಿಗೆಗಳು ಹಾಗೂ ಖಾಸಗಿ ನಿವೇಶನಗಳಿರುವ ಎಸ್ಎಲ್ಎನ್ ಚಿತ್ರಮಂದಿರದ ಹಿಂದಿನ ರಸ್ತೆಯು ಮೂತ್ರ ವಿಸರ್ಜನಾ ಗಲ್ಲಿಯಾಗಿ ಮಾರ್ಪಟ್ಟು ಹಲವು ದಶಕಗಳೇ ಕಳೆದಿವೆ. ಆದರೂ ಇಲ್ಲಿ ನೈರ್ಮಲ್ಯವನ್ನು ಕಾಪಾಡಿ ನಿವೇಶನದಾರರಿಗೆ ಅನುಕೂಲ ಕಲ್ಪಿಸುವ ಯಾವುದೇ ಕ್ರಮವನ್ನೂ ಇಲ್ಲಿನ ಪುರಸಭೆಯು ಇದುವರೆಗೂ ಕೈಗೊಳ್ಳದೇ ನಿರ್ಲಕ್ಷ ತೋರಿರುವ ಕಾರಣದಿಂದಾಗಿ ಇಲ್ಲಿ ವಾಸಿಸುವ ಜನರು ಉಸಿರು ಬಿಗಿಹಿಡಿದು, ಮೂಗು ಮುಚ್ಚಿ ವಾಸಿಸುವ ಅನಿವಾರ್ಯತೆ ಇದೆ.
ಇದು ಪುರಸಭೆ ನಿರ್ಲಕ್ಷ್ಯಕ್ಕೆ ಒಂದು ಸಣ್ಣ ಉದಾಹರಣೆ ಎಂದು ತೋರಬಹುದಾದರೂ ಖುದ್ದು ಪುರಸಭೆಯ ಪಕ್ಕದಲ್ಲಿನ ಶೌಚಾಲಯವೂ ಕೂಡ ನೈರ್ಮಲ್ಯತೆ ಕೊರತೆಯಿಂದ ಕೂಡಿದ್ದು, ಇಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೂ ಹೊಸ ಕಾಮಗಾರಿಗಳ ಕಡೆಗೆ ತೋರುವಷ್ಟು ಮುತುವರ್ಜಿಯನ್ನು ಪುರಸಭೆಯ ಆಡಳಿತವು ಕನಿಷ್ಠ ಮೂಲ ಸೌಕರ್ಯ ನೀಡುವಲ್ಲಿಯೂ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಇಲ್ಲಿನ ಪುರಸಭೆಯ ವಾಣಿಜ್ಯ ಸಂಕೀರ್ಣ ವ್ಯಾಪಾರಸ್ಥರ ದೂರಾಗಿದೆ. ರಸ್ತೆಯ ಎರಡೂ ಬದಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಯಾವ ಕಾಲವಾಗಿದೆ ಎಂಬುದನ್ನು ಪುರಸಭೆಯೇ ತಿಳಿಸಬೇಕು ಎಂದು ಇಲ್ಲಿನ ಅಕ್ಕ ಪಕ್ಕದ ವ್ಯಾಪಾರಿಗಳು ದೂರುತ್ತಾರೆ. ಅಲ್ಲದೇ ಈ ಭಾಗದ ಯಾವುದೇ ಕಸದ ರಾಶಿಯಿದ್ದರೂ, ಇಡೀ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳು ಮೂತ್ರ ವಿಸರ್ಜನೆಗಾಗಿ ಇದೇ ರಸ್ತೆಯನ್ನು ಅವಲಂಬಿಸಿರುವ ಕಾರಣದಿಂದಾಗಿ ಇದು ಇಂದು ತಿರುಗಲಾರದಷ್ಟು ಕೆಟ್ಟ ವಾಸನೆಯುಕ್ತ ರಸ್ತೆಯಾಗಿದೆ ಎಂದು ನಾಗರಿಕರು ದೂರಿದ್ದು, ಕೂಡಲೇ ಪುರಸಭೆಯು ಈ ತೊಂದರೆಯನ್ನು ಸರಿಪಡಿಸಬೇಕು.
-ಸಣ್ಣಪ್ಪ, ರವಿ, ಮಲ್ಲಣ್ಣ, ದಿನೇಶ್, ವ್ಯಾಪಾರಸ್ಥರು, ಹೊಳೆನರಸೀಪುರ
ನ್ಯಾಯಬೆಲೆ ಅಂಗಡಿಯಲ್ಲೇ ನ್ಯಾಯವಿಲ್ಲ...
ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಪಡಿತರ ಚೀಟಿಗೆ ಪಡಿತರ ನೀಡಲು ರು.20 ಅಧಿಕವಾಗಿ ಪಡೆಯಲಾಗುತ್ತಿದೆ.
ಅಧಿಕ ಹಣವನ್ನು ಪಡೆಯುವುದಲ್ಲದೆ, ಪಡಿತರ ನೀಡುವಾಗ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಒಂದು ಲೀಟರ್ ಸೀಮೆಎಮ್ಣೆ ಪಡೆಯಲು ಹೋದರೆ ಮುಕ್ಕಾಲು ಲೀಟರ್ ನೀಡುತ್ತಿದ್ದಾರೆ. ಅಕ್ಕಿ ಹಾಗೂ ಸಕ್ಕರೆಯಲ್ಲೂ ಕೂಡ ಒಂದು ಕೆಜಿಗೆ ಬದಲಾಗಿ ಮುಕ್ಕಾಲು ಕೆಜಿ ನೀಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳು ಹಾಗೂ ಆಹಾರ ಇಲಾಖೆಯ ಗೋದಾಮುಗಳಲ್ಲಿ ತುಂಬಾ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳು ಶೀಘ್ರವೇ ಗಮನ ಹರಿಸಿ ನ್ಯಾಯಬೆಲೆ ಅಂಗಡಿ ಹಾಗೂ ಆಹಾರ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಮುಂದಾಗಿ ಪಡಿತರದಾರರಿಗೆ ನ್ಯಾಯ ಕೊಡಿಸಬೇಕಿದೆ.
- ಕೆ.ಎಸ್. ತೀರ್ಥಪ್ಪ, ಬೇಲೂರು ನಿವಾಸಿ
ಪೈಪ್ ದುರಸ್ತಿಗೆ ಮುಂದಾಗಲಿ...
ಸಕಲೇಶಪುರ ಪಟ್ಟಣದಲ್ಲಿ ಕಾರಂಜಿ ಸುತ್ತಮುತ್ತ ಮಕ್ಕಳು ಆಟವಾಡುತ್ತಿದ್ದಾರೆ ಎಂದರೆ ಆ ಊಹೇ ಸುಳ್ಳು. ಇದು ಪಟ್ಟಣದ ಮಹೇಶ್ವರಿ ಬಡಾವಣೆಯ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ಕಳೆದ ಎರಡು ದಿನಗಳು ಕಳೆದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಿಲ್ಲ. ತಾಲೂಕಿನಲ್ಲಷ್ಟೆ ಅಲ್ಲದೆ, ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ, ನಮ್ಮ ಬಡಾವಣೆಯ ನೀರು ಪೋಲಾಗುತ್ತಿದೆ. ಮಕ್ಕಳಿಗೆ ಆಟ ದೊಡ್ಡವರಿಗೆ ಪ್ರಾಣ ಸಂಕಟ ಎಂಬಂತೆ ಈ ಪೈಪಿನಿಂದ ಕಾರಂಜಿಯಂತೆ ಚಿಮ್ಮುತ್ತಿರುವ ನೀರನ್ನು ನೋಡುತ್ತಾ ಮಕ್ಕಳು ಸಂತಸಗೊಂಡರೆ, ಮನೆಯಲ್ಲಿ ಕುಡಿಯಲು ನೀರಿಲ್ಲದೆ, ದೂರದ ಪ್ರದೇಶಗಳಿಂದ ನೀರನ್ನು ಹೊತ್ತು ತರುವ ಹಾಗೂ ಹಣ ನೀಡಿ ಟ್ಯಾಂಕರ್ನಲ್ಲಿ ನೀರು ಹಾಕಿಸಿಕೊಳ್ಳುವ ಮಂದಿ ವ್ಯಥೆ ಪಡುತ್ತಿದ್ದಾರೆ.
ಪೈಪ್ ದುರಸ್ತಿಪಡಿಸುವಂತೆ ಹಲವಾರು ಬಾರಿ ಪುರಸಭೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮುಂದಾದರೂ ಪುರಸಭೆ ಸಿಬ್ಬಂದಿ ಇತ್ತ ಗಮನಹರಿಸಿ ಪೈಪ್ ದುರಸ್ತಿಗೆ ತಕ್ಷಣವೇ ಮುಂದಾಗಲಿ.
- ಅರುಣ್, ಕಾಂತರಾಜು, ಮಂಜುನಾಥ್, ಅಕ್ಬರ್, ಮಹೇಶ್ವರಿ ಬಡಾವಣೆ, ಸಕಲೇಶಪುರ