ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರ ಪ್ರತಿಭಟನೆ ಇಂದು

Vishwanath S
Updated On : 19 May 2014, 12:43 pm

ಹಾಸನ: ಅಮೃತ್ ಮಹಲ್ ಕಾವಲು ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮ ಮಾಡಲು ಒತ್ತಾಯಿಸಿ  ಹಾಗೂ ಅರಣ್ಯ ಇಲಾಖೆಯ ಅಕ್ರಮ ಪ್ರವೇಶ ವಿರೋಧಿಸಿ ಮೇ 19 ರಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಆಶ್ರಯದಲ್ಲಿ  ನಗರದಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಹಾಸನ ತಾಲೂಕು ಸಾಲಗಾಮೆ ಹೋಬಳಿಯ ಚೌಡೇನಹಳ್ಳಿ, ಯಲಗುಂದ, ಕೆಲವತ್ತಿ ಮತ್ತು ರಾಮದೇವರಪುರದ ನಾಲ್ಕು ಗ್ರಾಮಗಳ ವ್ಯಾಪ್ತಿಯ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು 504 ಎಕರೆ ಭೂಮಿಯನ್ನು ಕಳೆದ 35 ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದು,  ಈ ಹಿಂದೆ ಸರ್ಕಾರ ರೈತರಿಗೆ ಸಾಗುವಳಿ ಚೀಟಿ ನೀಡಿದ್ದು, ಸುಮಾರು 70 ರೈತರಿಗೆ ಅವರ ಹೆಸರಿನಲ್ಲಿಯೇ ಪಹಣಿಯೂ ಬರುತ್ತಿದೆ.ಎಲ್ಲ ರೈತರು ಈ ಭೂಮಿಯನ್ನೂ ಸಾಗುವಳಿಮಾಡಿ ಅದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್‌ಕುಮಾರ್ ತಿಳಿಸಿದ್ದಾರೆ.
ತಿರುಮಲದೇವರ ಗುಡ್ಡ ಅಮೃತ್ ಮಹಲ್ ಕಾವಲಿಗೆ ಸಂಬಂಧಿಸಿದ ಪ್ರದೇಶವಾಗಿರುವ ಈ ಭೂಮಿಯನ್ನು ಇತ್ತೀಚೆಗೆ ಅರಣ್ಯ ಇಲಾಖೆಯು ಸರ್ವ ನಡೆಸಿ ಗುರುತಿನ ಕಲ್ಲನ್ನು ನೆಟ್ಟು, ಸಾಗುವಳಿ ಭೂಮಿಯನ್ನು ಅರಣ್ಯ ಇಲಾಖೆಗೆ ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿಹೋಗಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.  ಮೇ 19 ರಂದು  ನಗರದ ಹೇಮಾವತಿ ಪ್ರತಿಮೆಯ ಬಳಿಯಿಂದ ಬೆಳಿಗ್ಗೆ 11ಕ್ಕೆ  ಮೆರವಣಿಗೆ ಹೊರಟು ಜಿಲ್ಲಾಧಿಕಾರಿ  ಕಚೇರಿ ಆವರಣದಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.         
ವ್ಯಸನ ಮುಕ್ತಿ ಜಾಗೃತಿ ಇಂದು
ಹಾಸನ: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ನಮ್ಮ ಭಾರತ ವ್ಯಸನ ಮುಕ್ತ ಭಾರತ ಯೋಜನೆಯಲ್ಲಿ ನಮ್ಮ ಹಾಸನ ವ್ಯಸನ ಮುಕ್ತ ಹಾಸನ ಉದ್ಘಾಟನಾ ಸಮಾರಂಭವನ್ನು ರಂಗೋಲಿಹಳ್ಳ, ಬ್ರಹ್ಮಾಕುಮಾರೀಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ಯಾಮಲಾ ದೇವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಸ್ತಾವನಾ ಭಾಷಣ ಭಾಷಣವನ್ನು ಹಿರಿಯ ರಾಜಯೋಗ ಶಿಕ್ಷಕರು, ಮೈಸೂರು, ಬ್ರಹ್ಮಾಕುಮಾರ ಪ್ರಾಣೇಶ್ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಕುಮಾರೀಸ್  ಜಿಲ್ಲಾ ಸಂಚಾಲಕ ಮೀನಾ ವಹಿಸುವರು. ಆಶ್ರಯ ಕ್ಲಿನಿಕ್ ಮನೋರೋಗ ತಜ್ಞರು ಡಾ. ಕಿರಣ್‌ಕುಮಾರ್, ಅನಾಮಿಕ ಅಮಲುರೋಗ ತಜ್ಞರು ಬಾಳ್ಳುಪೇಟೆ ಲುಯಿಸ್ ಇತರರು ಭಾಗವಹಿಸಲಿದ್ದಾರೆ.
ಬಿಜೆಪಿ ಜಯಭೇರಿ: ಕಾರ್ಯಕರ್ತರ ಸಂಭ್ರಮ
ಅರಸೀಕೆರೆ: ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿಯ ಅಭೂತಪೂರ್ವ ಸಾಧನೆಯಿಂದ ಸಂತಸಗೊಂಡ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರದಲ್ಲಿ ಬಿಜೆಪಿಯು ಅಭೂತಪೂರ್ವ ಗೆಲವು ದಾಖಲಿಸಿ, ಕೇಂದ್ರದಲ್ಲಿ  ಏಕಪಕ್ಷೀಯ ಆಡಳಿತ ಆಸ್ತಿತ್ವಕ್ಕೆ ಬರುತ್ತಿರುವುದರಿಂದ ಪುಳಕಿತರಾದ ಕಾರ್ಯಕರ್ತರು ಸಂಭ್ರಮ ಆಚರಣೆಯಲ್ಲಿ ತೊಡಗಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಪಟ್ಟಣದ ನಾನಾ ಭಾಗಗಳಲ್ಲಿ ಕೆಲವು ಮಂದಿ ಯುವಕರು ಅಲ್ಲಲ್ಲಿ ಪರಸ್ಪರ ಸಿಹಿ ಹಂಚುವ ಮೂಲಕ ಮತ್ತು ಮುಖಕ್ಕೆ  ಬಣ್ಣ  ಎರೆಚಿಕೊಂಡು  ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ವಾಣಿಜ್ಯೋತ್ಸವ
ಹಾಸನ: ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ  ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಜಿಲ್ಲಾ ಮಟ್ಟದ ವಾಣಿಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ  ವಿಭಾಗದ ಸಹಾಯಕ ಪ್ರಾಧ್ಯಾಪಕ ಎ.ರವಿಕಾಂತ ಹಾಗೂ ಉಪನ್ಯಾಸಕ ಎಚ್.ಜೆ.ಗಿರೀಶ್ ಮತ್ತು ಸುಜಲಾ ಕಾಲೇಜಿನ ಉಪನ್ಯಾಸಕ ಸಿ.ಆರ್. ವಿಶ್ವನಾಥ್ ಅವರು ಜಂಟಿಯಾಗಿ ಬರೆದ ಫೈನಾನ್ಸಿಯಲ್ ಅಕೌಂಟಿಂಗ್-2 ಪುಸ್ತಕವನ್ನು ಬೆಂಗಳೂರಿನ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ವಲಯ ಜಿಲ್ಲಾಧ್ಯಕ್ಷ  ಎಚ್.ಟಿ.ಚಂದ್ರಶೇಖರ್ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿಭಾಗದ ಉಪನ್ಯಾಸಕರು ಈ ಗ್ರಂಥದ  ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಾಂಶುಪಾಲ ಕೆ.ಶಾಮಭಟ್, ವಿಭಾಗ ಮುಖ್ಯಸ ಎಂ.ಎಸ್. ಕೂಗೇಗೌಡ, ಕೆ.ಯು.ಬಸಪ್ಪ, ಎಚ್.ಎಸ್. ಪರಮೇಶ್ವರಪ್ಪ ಮತ್ತು ಗ್ರಂಥ ಕರ್ತೃಗಳಾದ ಎ.ರವಿಂಕಾಂತ,  ಎಚ್.ಜೆ. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಲ್ಲಿ ರಕ್ತದಾನ ಶಿಬಿರ
ಹಾಸನ: ದಾನ-ದಾನಗಳಲ್ಲಿ ಅತಿ ಶ್ರೇಷ್ಠವಾದದ್ದು ರಕ್ತದಾನ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತಗುಂಪು ಪರೀಕ್ಷೆ ಮತ್ತು ರಕ್ತದಾನ ಮಾಡುವುದು ಅತ್ಯವಶ್ಯ ಎಂದು  ಪ್ರಾಂಶುಪಾಲ ಪ್ರೊ. ಶಾಮಭಟ್ ಕಿವಿಮಾತು ಹೇಳಿದರು.
ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜು, ರೆಡ್ ರಿಬ್ಬನ್ ಕ್ಲಬ್, ಯುವ ರೆಡ್  ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು  ಹಾಸನ ರಕ್ತನಿಧಿ ವಿಭಾಗ ಮತ್ತು ಸಿಬ್ಬಂದಿ ವರ್ಗದ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಕ್ತದಾನ ಶಿಬಿರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ದೇವದಾಸ್ ಮಾತನಾಡಿ, ರಕ್ತ ಪರೀಕ್ಷೆ ಮತ್ತು ದಾನ ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಹಾಗೂ ಯಾರಾದರೂ,   ಕೇಳಿಕೊಂಡು ಬಂದವರಿಗೆ ಹೊಂದಿಕೊಳ್ಳುವಂತಹ ರಕ್ತ ನೀಡಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕ ಟಿ.ಎನ್.ನಾಗರಾಜು ನೇತೃತ್ವದಲ್ಲಿ  ಹಲವು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಎಚ್.ಕೆ.ಜಯರಾಮು, ಎಚ್.ಎಸ್.ನಿಂಗಪ್ಪ, ರೆಡ್‌ಕ್ರಾಸ್ ಸಂಚಾಲಕ  ಎಚ್.ಎಸ್. ಪರಮೇಶ್ವರಪ್ಪ, ಭಾರತ  ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಮುಖ್ಯಸ್ಥ  ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ನಿರ್ಲಕ್ಷ್ಯ: ಮಹಿಳೆ ಕೋಮಾದಲ್ಲಿ
ಹಾಸನ: ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆರಿಗೆಗೆ ಬಂದ ಮಹಿಳೆಯೊಬ್ಬರು ಕಳೆದ ಮೂರು ದಿನಗಳಿಂದ ಪ್ರಜ್ಞೆ ಇಲ್ಲದೆ ಹಾಸಿಗೆ ಹಿಡಿದಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಹೊಳೆನರಸೀಪುರ ತಾಲೂಕಿನ ನ್ಯಾಮನಹಳ್ಳಿ ನಿವಾಸಿ ಕೃಷ್ಣಶೆಟ್ಟಿ ಎಂಬುವರು ತನ್ನ ಪತ್ನಿ ರೂಪಾ ಅವರನ್ನು ಚೊಚ್ಚಲ ಹೆರಿಗಾಗಿ ಗುರುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು.  ವೈದ್ಯ ರಘುನಾಥ್ ಎಂಬುವರು ಗರ್ಭಿಣಿಯನ್ನು ಪರೀಕ್ಷಿಸಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ಹೇಳಿ, ಸಂಜೆ ಆದರೂ ಬಂದಿರಲಿಲ್ಲ. ನಂತರ ಬಂದ ವೈದ್ಯರು ಸಿಜೆರಿನ್ ಮಾಡಬೇಕು ಎಂದು ಹೇಳಿದರು. ಪ್ರಜ್ಞೆ ತಪ್ಪಿಸುವ ಸಿರಂಜ್ ನೀಡಿ ಚಿಕಿತ್ಸೆ ನೀಡಲಾಯಿತು. ನಂತರ ಆಕೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಹೆರಿಗೆ ಆದ ಮೇಲೆ ವೈದ್ಯರು ಮತ್ತೆ ನೋಡಲು ಬಂದಿಲ್ಲ. ಈಗ ರೂಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಮೂರು ದಿವಸದಿಂದ ಹಾಸಿಗೆ ಮೇಲೆ ಮಲಗಿದ್ದು, ಇನ್ನು ಪ್ರಜ್ಞೆ ಬಂದಿಲ್ಲ. ಸಿಜರಿನ್ ಮಾಡುವ ವೇಳೆ ಗಂಡನಿಂದ ಒಪ್ಪಿಗೆ ಪಡೆದು ಸಹಿ ಹಾಕಿಸಿಕೊಳ್ಳಬೇಕಾಗಿದ್ದ ವೈದ್ಯರು ರೂಪಾಳ ತಾಯಿಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಇತರೆ ವೈದ್ಯರಿಗೆ ಕೇಳಿದರೆ, ಹೃದಯಾಘಾತ ಆಗಿರಬಹುದು ಎಂದು ಹೇಳುತ್ತಿದ್ದಾರೆ. ವೈದ್ಯರ ಬೇಜವಾಬ್ಧಾರಿಯಿಂದ ಇಂತಹ ಘಟನೆ ನಡೆದಿದೆ. ಇಂತಹ ಘಟನೆ ಹಿಂದೆ ಹಲವಾರು ನಡೆದು ಮಹಿಳೆಯರು ಸಾವನಪ್ಪಿದ್ದಾರೆ ಎಂದು ರೂಪಾ ಸಂಬಂಧಿಕರ ಆರೋಪ. ರೂಪಾ ಆರೋಗ್ಯವಾಗಿ ಮನೆಗೆ ಬಂದರೆ ಸಾಕು ಎನ್ನುತ್ತಿದ್ದಾರೆ. ಈ ಹಿಂದೆ ರೂಪಳನ್ನು ನಿರ್ಮಲಾ ವೈದ್ಯರ ಬಳಿ ತಿಂಗಳ ಪರೀಕ್ಷೆಗೆ ತೋರಿಸಲಾಗುತ್ತಿತ್ತು ಎಂಬ ದೂರು ಸಂಬಂಧಿಕರಿಂದ ಕೇಳಿ ಬಂದಿತು. ಭಾನುವಾರ ಬೆಳಿಗ್ಗೆ ಆಕ್ರೋಶಗೊಂಡ ನ್ಯಾಮನಹಳ್ಳಿ ನಿವಾಸಿಗಳು ವೈದ್ಯರ ಬಳಿ ಚರ್ಚೆ ಮಾಡಿದರು. ಕೆಲ ಸಮಯ ಬಿಗುವಿನ ವಾತವರಣ ಉಂಟಾಗಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಬಿಗುವಿನ ವಾತಾವರಣ ತಿಳಿಗೊಳಿಸಿದರು.
ಅರ್ಜಿ ಆಹ್ವಾನ
ಹಾಸನ: ತಾಲೂಕಿನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಿದ್ಯಾರ್ಥಿ  ನಿಲಯಗಳಿಗೆ5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಹಾಗೂ ಸಮಾಜದ ಅತ್ಯಂತ ದುರ್ಬಲ ವರ್ಗದವರ ಮಕ್ಕಳಿಂದ ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಮಾಜ ಕಲ್ಯಾಣ ಸಮಾಜ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಸಾಮೂಹಿಕ ಉಪನಯನ 30ಕ್ಕೆ
ಹಾಸನ: ಬ್ರಾಹ್ಮಣ ಸಭಾ, ಶೃಂಗೇರಿ ಶಂಕರಮಠದ ಸಹಯೋಗದಲ್ಲಿ
ಮೇ 30ರಂದು ಬೆಳಗ್ಗೆ 8.40 ರಿಂದ 9ರೊಳಗೆ ಸ್ಥಳೀಯ ಮತ್ತು ಪರ ಸ್ಥಳೀಯ ವೈದಿಕರ ಆಚಾರ್ಯತ್ವದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ನಗರದ ಶಂಕರಮಠದಲ್ಲಿ ಏರ್ಪಡಿಸಲಾಗಿದೆ.ಬ್ರಹ್ಮೋಪದೇಶ ಬಯಸುವ ವಟುಗಳ ಹೆಸರನ್ನು ಮೇ 20ರ ಸಂಜೆ  5ರೊಳಗಾಗಿ ವೈದಿಕ ಭವನದಲ್ಲಿ ಇರುವ ಹಾಸನ ನಗರ ಬ್ರಾಹ್ಮಣ ಸಭಾ ಕಾರ್ಯಾಲಯದಲ್ಲಿ ಅಥವಾ ಶೃಂಗೇರಿ ಶಂಕರಮಠದ ಕಾರ್ಯಾಲಯದಲ್ಲಿ  ನೋಂದಾಯಿಸಬೇಕು. ಆಸಕ್ತರು, ದೂ. 08172- 262022, 250022, ಮೊ. 98809-68879 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಬೀಳ್ಕೊಡುಗೆ: ಸಕಲೇಶಪುರ ಲೂಕಿನ ಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಸಹಾಯಕ ಕೃಷಿ ನಿರ್ದೇಶಕ ಯೋಗೇಶ್ ಅವರನ್ನು ಇತ್ತೀಚೆಗೆ ಸನ್ಮಾನಿಸಿ ಬೀಳ್ಕೋಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಯೋಗೇಶ್, ಇಲ್ಲಿನ ಜನತೆ ಒಳ್ಳೆಯವರಾಗಿದ್ದು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೆ ಜನತೆ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡಿದ್ದಾರೆ ಎಂದು ಸ್ಮರಿಸಿದರು. ಗೊಬ್ಬರ ಮಾರಾಟಗಾರರ ಸಂಘದ ಶಶಿಧರ್ ಸೇರಿದಂತೆ ಮತ್ತಿತರರು ಮಾತನಾಡಿದರು. ಇದೇ ವೇಳೆ ಜಿಲ್ಲಾ ಕೃಷಿ ನಿರ್ದೇಶಕ ಶಿವರಾಜ್ ಅವರನ್ನು ಸನ್ಮಾನಿಸಲಾಯಿತು. ಗೊಬ್ಬರ ಮಾರಾಟಗಾರರ ಸಂಘದ ರವಿತೇಜಾ, ರಾಜೇಶ್ ಸೇರಿದಂತೆ ಇತರರು ಇದ್ದರು.
ವರ್ಗಾವಣೆ: ಸಕಲೇಶಪುರದಲ್ಲಿ ಕಳೆದ ಆರು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಎಚ್ ಯೋಗೇಶ್ ಭಡ್ತಿ ಪಡೆದು ವರ್ಗಾವಣೆಗೊಂಡಿದ್ದಾರೆ.
ಬೆಡೇಸ್ತಾ ಶಾಲೆಗೆ ಉತ್ತಮ ಫಲಿತಾಂಶ
ಆಲೂರು: ತಾಲೂಕಿನ ಬೆಡೇಸ್ತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಶಾಲೆಯ ವಿದ್ಯಾರ್ಥಿ ಡಿ.ಪೂರ್ಣಿಮಾ 603 (96.48) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೆ.ವಿ.ನಾಗಮಣಿ 598 (ಶೇ.95.68) ಅಂಕ ಪಡೆಯುವ ಮೂಲಕ ತಾಲೂಕಿಗೆ ಎರಡನೇ ಸ್ಥಾನ ಪಡೆದಿದ್ದಾಳೆ. ಕೆ.ಬಿ.ಸುಮಂತ್ 567 (ಶೇ.90.08) ಅಂಕ, ಸೌಂದರ್ಯ 563 (ಶೇ.90.08) ಅಂಕಗಳು, ಎಚ್.ಎಸ್.ಚಿಂತನ 563 (ಶೇ.90.08), ಸಿ.ಎಂ.ದರ್ಶನ್ 562 (89.92), ಬಿ.ಪಿ.ಸುರಭಿ 538 (86.08) ಅಂಕಗಳು.ಜೀನತ್ 554 (88.64) ಅಂಕ, ಕೆ.ಪಿ.ಪ್ರಗತಿ 563 (90.08) ಅಂಕ ಮತ್ತು ಬಿ.ಎಸ್.ಇಂಪನ 559 (ಶೇ.82.72) ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಆರ್‌ಟಿಇ ಸಭೆಗೆ ಆಗ್ರಹ
ಹಾಸನ: ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಫಲಾನುಭವಿ, ಪ್ರವೇಶ ಪಡೆದು ಶಾಲೆ ಬಿಟ್ಟ ಮಕ್ಕಳ ಪೋಷಕರ, ಪ್ರಗತಿಪರರ, ಪ್ರಗತಿಪರ  ಸಂಘಟನಗಳ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಸಂಘಟನಗಳ ಸಭೆ ಕರೆದು, ಈ ಕಾಯ್ದೆ ಬಗ್ಗೆ ಮಾಹಿತಿ ನೀಡಿ ತಿಳಿವಳಿಕೆ ಮೂಡಿಸಬೇಕು ಎಂದು ಶಿಕ್ಷಣ ಹಕ್ಕು ಸಮಿತಿ ಅಧ್ಯಕ್ಷ  ಬಿ.ಜಿ.ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಭಾರತದ ಸಂದರ್ಭದಲ್ಲಿ ಶಿಕ್ಷಣ ವ್ಯಾಪಾರೀಕರಣಗೊಂಡು ದಶಕಗಳೇ ಸಂದಿವೆ. ಪರ್ಯಾಯ ನೀತಿಗಳನ್ನೇ ರೂಪಿಸುವಷ್ಟು ಹಂತಕ್ಕೆ ಬೆಳೆದು ನಿಂತಿರುವ ಶಿಕ್ಷಣ ಸಂಸ್ಥೆಗಳು, ಡೊನೇಷನ್ ರೂಪದಲ್ಲಿ ಹಗಲು ದರೋಡೆ ಮಾಡುತ್ತಿವೆ ಎಂಬುದು ಜಗಜಾಹೀರಾಗಿದ್ದರೂ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ ನಡಿಗೆ ಜನಸಾಮಾನ್ಯರನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿವೆ. ಮತ್ತು ಶಿಕ್ಷಣ ಉಳ್ಳವರ ಪಾಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement