ಸಕಲರಿಗೂ ಲೇಸು ಬಯಸುವವನೇ ನಿಜ ಸಂತ
ಅರಸೀಕೆರೆ: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ನಾಡನ್ನೇ ಲಿಂಗಾಲೀನ ವಿನೋದವಾಗಿ ಮಾಡಿದ ನಿಜ ಜಂಗಮ ತತ್ವ ನಿಷ್ಠ ಶಿವಲಿಂಗ ಸ್ವಾಮೀಜಿ ಸಂಸ್ಮರಣಾರಾಧನೆಯಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆತದ್ದು ನಮ್ಮ ಭಾಗ್ಯ ಎಂದು ಹೊಸಪೇಟೆ ಹಾಲಕೇರಿ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಸಂಗನ ಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ನಡೆದ ಶಿವಲಿಂಗ ಸ್ವಾಮೀಜಿ ಸಂಸ್ಮರಣಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾಲಜ್ಞಾನಿ ಮಹಾತಪಸ್ವಿ ಶಿವಲಿಂಗಜ್ಜಯ್ಯ ತಮ್ಮ ತಪೋಬಲದಿಂದ ಶ್ರೀಕ್ಷೇತ್ರ ಕೋಡಿಮಠ ನಾಡಿನ ಭವಿಷ್ಯ ತಿಳಿಸುವ ಪುಣ್ಯಕ್ಷೇತ್ರವಾಗಿ ಬೆಳೆದಿದೆ. ಅಲ್ಲದೆ ಸನಾತನ ಸಂಸ್ಕೃತಿ, ಆಚಾರ-ವಿಚಾರಗಳ ಧಾರ್ಮಿಕ ಕೇಂದ್ರವಾಗಿರುವ ಶ್ರೀಮಠಕ್ಕೆ ನಾಡಿನ ಮೂಲೆ ಮೂಲೆಯಿಂದ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಆ ಮೂಲಕ ರಾಷ್ಟ್ರದ ಅನೇಕ ಗಣ್ಯಮಾನ್ಯರನ್ನು ತನ್ನ ಕಡೆಗೆ ಆಕಷಿಸುವ ಮೂಲಕ ಇಲ್ಲಿನ ಆಧ್ಯಾತ್ಮಿಕ ಚಿಂತನೆ ಕಂಪನ್ನು ಪಸರಿಸಿದೆ ಎಂದು ಗುಣಗಾನ ಮಾಡಿದರು.
ಭಾರತೀಯ ಸಂಸ್ಕೃತಿಯನ್ನು ವಿದೇಶಿಯರೂ ಕೂಡ ಮೆಚ್ಚಿ ಅನುಕರಿಸುತ್ತಿರುವುದು ನಾಡಿನ ಭಕ್ತಿ, ಪರಂಪರೆ ಹಾಗೂ ಶರಣರ ನಾಡು ಎಂಬ ಕಾರಣದಿಂದಾಗಿಯೇ ಹೊರತು, ಅನ್ಯ ಕಾರಣಗಳಿಂದಲ್ಲ. ಭಾರತೀಯರ ಸಹನೆ, ತಾಳ್ಮೆ ಹಾಗೂ ಇತರರನ್ನು ಗೌರವಿಸುವ ಗುಣವನ್ನು ಜಗತ್ತಿನಾದ್ಯಂತ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಶಿವಶರಣರು ಹುಟ್ಟಿ ಬೆಳೆದ ಈ ನಾಡಿನಲ್ಲಿ ಭಕ್ತಿ ಪರಂಪರೆಯಿಂದಾಗಿಯೇ ಇತರರು ನಮ್ಮನ್ನು ಗೌರವಿಸುವಂತಾಗಿದೆ ಎಂದು ಬಣ್ಣಿಸಿದರು.
ಒಳ ಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಡಿ.ಎಂ.ಕುರ್ಕೆ ವಿರಕ್ತಮಠದ ರಾಜಶೇಖರ ಸ್ವಾಮೀಜಿ, ಸಕ್ರಾಯಪಟ್ಣಣ ಕರಡಿ ಗವಿಮಠದ ಶಂಕರಾನಂದ ಸ್ವಾಮೀಜಿ, ಶಿವಯೋಗಿ ಸ್ವಾಮೀಜಿ, ಕನಕಗಿರಿ ವಿರಕ್ತಮಠದ ಚನ್ನಗಿರಿ ಸ್ವಾಮೀಜಿ, ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಮಾಡಾಳು ವಿರಕ್ತಮಠದ ರುದ್ರಮುನಿಸ್ವಾಮೀಜಿ ಹಾಗೂ ಚನ್ನರಾಯಪಟ್ಟಣ ಕತ್ರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮತ್ತಿತರರು ಭಾಗವಹಿಸಿದ್ದರು.
ಇದೇ ವೇದಿಕೆಯಲ್ಲಿ ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಪಂಡಿತ ರಾಜಗುರು ಗುರುಸ್ವಾಮಿ ಕಲ್ಕೇರಿ ಅವರಿಗೆ ಶಿವಲಿಂಗಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಕೆ.ಎನ್.ದುರ್ಗಪ್ಪಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅನೇಕ ಗಣ್ಯರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ನಟ ದೊಡ್ಡಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ್‌ಮಿರ್ಜಿ ಇನ್ನಿತರರು ಪಾಲ್ಗೊಂಡಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಚ್.ಪಿ.ಬಸವಲಿಂಗಪ್ಪ ಕಾರ್ಯಕ್ರಮ ನಿರೂಪಿಸಿ, ಮಹಾದೇವಪ್ಪ ವಂದಿಸಿದರು.