ಫ್ರಿ ಮೆಟ್ರಿಕ್ ಹಾಸ್ಟೆಲ್ಗೆ ಅರ್ಜಿ ಆಹ್ವಾನ
ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸನ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳಲ್ಲಿ ಉಚಿತವಾಗಿ ಪಡೆದು, ಮೇ 31ರೊಳಗೆ ಸಂಬಂಧಪಟ್ಟ ವಿದ್ಯಾರ್ಥಿನಿಲಯಗಳ ನಿಲಯಮೇಲ್ವಿಚಾರಕರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ, ನೋಟ್ ಪುಸ್ತಕ, ಸೋಪು, ಸಮವಸ್ತ್ರ, ಮುಂತಾದವುಗಳನ್ನು ನಿಲಯಗಳಲ್ಲಿ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ನಿಲಯಗಳ ವಿವರ : ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿ.ನಿಲಯ, ಹಾಸನ, ಮೆಟ್ರಿಕ್ಪೂರ್ವ ಬಾಲಕರ ವಿ.ನಿಲಯ, ಸಾರಾಪುರ, ಕೆ.ಹಿರೀಹಳ್ಳಿ, ದೊಡ್ಡಗೇಣಿಗೆರೆ, ಮೆಳಗೋಡು, ದುದ್ದ, ಗಾಡೇನಹಳ್ಳಿ, ಕಟ್ಟಾಯ, ಕಬ್ಬತ್ತಿ, ಮುತ್ತಿಗೆ ಹಿರೇಹಳ್ಳಿ, ಮೊಸಳೆಹೊಸಹಳ್ಳಿ, ಕೆ. ಹಿರೀಹಳ್ಳಿ.
ನಿಬಂಧನೆಗಳು: ಸರ್ಕಾರದಿಂದ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5 ರಿಂದ 10ನೇ ತರಗತಿವರೆಗೆ ವ್ಯಾಸಂಗ, ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರವರ್ಗ-2ಎ, 2ಬಿ, 3ಎ, 3ಬಿಗೆ ಸೇರಿದ ವಿದಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರು. 44500 ಮಿತಿ ಇದೆ. ಮತ್ತು ಪ್ರವರ್ಗ-1 ಇವರಿಗೆ ಕುಟುಂಬದ ವಾರ್ಷಿಕ ವರಮಾನ 1,00,000 ಹಾಗೂ ಪರಿಶಿಷ್ಟಜಾತಿ, ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕುಟುಂಬದ ಆದಾಯಮಿತಿ 2,00,000 ಮಿತಿಗಳಿವೆ. ಶೈಕ್ಷಣಿಕ ಸಂಸ್ಥೆಯಿಂದ 5 ಕಿ.ಮೀ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇ.90ರಷ್ಟು ಸ್ಥಾನಗಳನ್ನು ಹಾಗೂ ಉಳಿದ ಶೇ.10ರಷ್ಟು ಸ್ಥಾನಗಳಲ್ಲಿ 5 ಕಿ.ಮೀ. ಗಿಂತ ಕಡಿಮೆ ದೂರದ ಸ್ಥಳದಿಂದ ಬರುವ ವಿದ್ಯಾರ್ಥಿಗಳಿಗೆ ನೀಡಲಾಗವುದು. ನವೀಕರಣ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾದ ದಿನದಿಂದ ನಿಲಯದಲ್ಲಿ ಪ್ರವೇಶವಕಾಶ ನೀಡಲಾಗುವುದು.
ಸಲ್ಲಿಸಬೇಕಾದ ದಾಖಲೆಗಳು : ಅರ್ಜಿ ನಮೂನೆ, ಸಂಬಂಧಪಟ್ಟ ತಹಸೀಲ್ದಾರ್ರಿಂದ ಪಡೆದಿರುವ ಜಾತಿ ಮತ್ತು ಆದಾಯ ದೃಢೀಕರಣದ ಪ್ರತಿ, ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲಾ ಮುಖ್ಯಸ್ಥರು ಅರ್ಜಿಯಲ್ಲಿ ದೃಢೀಕರಿಸಿದ ದೃಡೀಕರಣ ಪತ್ರ, ವಿದ್ಯಾರ್ಥಿ ಕಳೆದ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಅಂಕಪಟ್ಟಿಯ ಪ್ರತಿ. ಅಂಗವಿಕಲ ವಿದ್ಯಾರ್ಥಿಗಳು ವಿಕಲತೆಯ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ. ಸ್ವಾತಂತ್ರ್ಯ ಹೋರಾಟಗಾರರ, ಮಾಜಿ ಸೈನಿಕರ, ವಿಧವೆಯರ, ದೇವದಾಸಿಯರ, ಅಂಗವಿಕಲರ, ಅನಾಥ ಮಕ್ಕಳು, ಪ್ರಮಾಣೀಕೃತ ಬಾಲ ಕಾರ್ಮಿಕರು, ಯೋಜನಾ ನಿರ್ವಸಿತ ಪೋಷಕರ ಮಕ್ಕಳು, ಅಲೆಮಾರಿ ಜನಾಂಗದವರ ಮಕ್ಕಳು, ಭಿಕ್ಷುಕರ ಮಕ್ಕಳು, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು.