ವಿಜೃಂಭಣೆಯ ಕರಿಯಮ್ಮ, ಮಲ್ಲಿಗಮ್ಮ ಉತ್ಸವ
ಅರಸೀಕೆರೆ: ಪಟ್ಟಣದ ಗ್ರಾಮದೇವತೆ ಶ್ರೀಕರಿಯಮ್ಮ ಮತ್ತು ಶ್ರೀಮಲ್ಲಿಗಮ್ಮ ದೇವಿಯ ತಿಂಗಳ ಬಾನ ನೈವೇದ್ಯ ಧಾರ್ಮಿಕ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ನೂರಾರು ಭಕ್ತಾಧಿಗಳು ಸೇರಿ ಸಡಗರ ಸಂಭ್ರಮದಿಂದ ಶ್ರೀದೇವಿಯವರ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದರು.
ಪ್ರತಿ ವರ್ಷದಂತೆ ಚೈತ್ರಮಾಸದಲ್ಲಿ ನಡೆಯುವ ಗ್ರಾಮದೇವತೆ ಕರಿಯಮ್ಮದೇವಿ ಹಾಗೂ ಮಲ್ಲಿಗಮ್ಮ ದೇವಿ ಮಹಾರಥೋತ್ಸವದ ಜಾತ್ರಾ ಮಹೋತ್ಸವ ನಡೆದ ಒಂದು ತಿಂಗಳಿಗೆ ಸರಿಯಾಗಿ ತಿಂಗಳ ಬಾನ ನೈವೇದ್ಯ ಧಾರ್ಮಿಕ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯುತ್ತಿದೆ.
ಮೇ 20 ರಂದು ಮಂಗಳವಾರ ರಾತ್ರಿ ಗ್ರಾಮದೇವತೆಗಳಾದ ಶ್ರೀಕರಿಯಮ್ಮದೇವಿ ಮತ್ತು ಶ್ರೀಮಲ್ಲಿಗಮ್ಮ ದೇವಿಯವರಿಗೆ ಸಂಪ್ರದಾಯಕ ಧಾರ್ಮಿಕ ವಿಧಿವಿಧಾನದಂತೆ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ರಾತ್ರಿ 7 ರಲ್ಲಿ ನಾನಾ ಬಗೆಯ ಪುಷ್ಪಗಳಿಂದ ಅಲಂಕೃತವಾದ ಶ್ರೀಕರಿಯಮ್ಮದೇವಿಯ ಉತ್ಸವಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಭಕ್ತರು ಕುಳ್ಳಿರಿಸಿ ಮಂಗಳ ವಾದ್ಯಗಳೊಂದಿಗೆ ದೇವಾಲಯ ಆವರಣದಿಂದ ಶ್ಯಾನುಭೋಗರ ಬೀದಿ ಮಾರ್ಗವಾಗಿ ಶ್ರೀಗುರುಸಿದ್ದರಾಮೇಶ್ವರ ಮಠಕ್ಕೆ ಆಗಮಿಸಿ, ಅಲ್ಲಿ ದೇವರಿಗೆ ಪೂಜಾ ಕಾರ್ಯಗಳು ನೆರವೇರಿದ ನಂತರ ಶ್ರೀಕರಿಯಮ್ಮದೇವಿ ಮೂಲಸ್ಥಾನಕ್ಕೆ ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು.
ಮೆರವಣಿಗೆಯಲ್ಲಿ ದೂತರಾಯಸ್ವಾಮಿ ಮತ್ತು ಚಲುವರಾಯಸ್ವಾಮಿ ಹಾಗೂ ಕೆಂಚಪ್ಪ ದೇವರ ಕುಣಿತವನನು ವಿಕ್ಷೀಸಲು ನೂರಾರು ಸಂಖ್ಯೆಯಲ್ಲಿ ಭಕ್ತರು ಬೀದಿಯ ಬದಿಗಳಲ್ಲಿ ಜಮಾಯಿಸಿದ್ದರು. ಅನಂತರ ಮೂಲಸ್ಥಾನದಲ್ಲಿ ಶ್ರೀಕರಿಯಮ್ಮದೇವಿಗೆ ಬಾನ ನೈವೇದ್ಯ ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.