ಚಿಕ್ಕಮ್ಮ- ದೊಡ್ಡಮ್ಮ ಹಬ್ಬ ಸಂಭ್ರಮದ ಆಚರಣೆ
ಹೊಳೆನರಸೀಪುರ: ಪಟ್ಟಣದ ಸಮೀಪವಿರುವ ಮಂಗಲಾಪುರ ಗ್ರಾಮದಲ್ಲಿ ಮಂಗಳವಾರ ಇಲ್ಲಿನ ಗ್ರಾಮಸ್ಥರು ಚಿಕ್ಕಮ್ಮ-ದೊಡ್ಡಮ್ಮ ದೇವರ ಹಬ್ಬವನ್ನು ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರುಗಳು 101ಕಳಸಗಳನ್ನು ಹೊತ್ತು, ದೇವರ ಪೂಜೆಗಾಗಿ ವ್ರತವನ್ನು ಆಚರಿಸಿದ ಬಾಲಕಿಯರೊಂದಿಗೆ ಮೆರವಣಿಗೆಯಲ್ಲಿ ಗ್ರಾಮದಿಂದ ಸುಮಾರು 3 ಕಿ.ಮೀಗಳ ದೂರದವರೆಗೂ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಚಿಕ್ಕಮ್ಮ-ದೊಡ್ಡಮ್ಮ ದೇವರ ದೇಗುಲಕ್ಕೆ ನಡೆದು ಬಂದರು.
ನಾನಾ ವಾದ್ಯಗಳೊಂದಿಗೆ ಗ್ರಾಮದ ಯುವಕರು ಬಣ್ಣದ ಓಕುಳಿಯೊಡನೆ ಕುಣಿಯುತ್ತ ಸಾಗಿ ಬಂದ ಮೆರವಣಿಗೆಯು ಪಟ್ಟಣದ ಪೇಟೆ ಮುಖ್ಯ ರಸ್ತೆಯ ಮೂಲಕ ಹಾದು ಕೋಟೆ ಮುಖ್ಯ ರಸ್ತೆ ನಂತರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಚಿಕ್ಕಮ್ಮ-ದೊಡ್ಡಮ್ಮ ದೇವರ ದೇವಸ್ಥಾನವನ್ನು ತಲುಪಿತು. ಪ್ರತೀ ವರ್ಷವೂ ಮಂಗಲಾಪುರ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿನ ಜನ-ಜಾನುವಾರುಗಳ ಸುಖ-ಸಮೃದ್ಧಿಗಾಗಿ ಹರಕೆ ಹೊತ್ತು ಈ ಹಬ್ಬವನ್ನು ಸಡಗರ ಸಂಭ್ರದೊಂದಿಗೆ ಆಚರಿಸುತ್ತಾರೆ.
ಹಬ್ಬದ ಅಂಗವಾಗಿ ದೇವರಿಗೆ ಹರಕೆಯಾಗಿ ಬಲಿ ನೀಡಲಾಗುತ್ತದೆ. ಅಲ್ಲದೇ ಈ ಹಬ್ಬವನ್ನು ಗ್ರಾಮದ ಎಲ್ಲ ಒಟ್ಟುಗೂಡಿ ಗ್ರಾಮದ ಒಳಿತಿಗಾಗಿ ಹಬ್ಬ ಆಚರಿಸುವುದು ವಿಶೇಷ.
ಈ ಹಬ್ಬದ ಉಸ್ತುವಾರಿಯನ್ನು ಗ್ರಾಮದ ಯುವಕರಾದ ಮಹಲಿಂಗ, ಚಂದ್ರು, ಅಣ್ಣಾಜಿಗೌಡ, ಶ್ರೀನಿವಾಸ್, ಅಣ್ಣಪ್ಪ, ನಿಂಗರಾಜು, ಗಣೇಶ್ ಮೊದಲಾದವರು ಹೊತ್ತಿದ್ದರು.