ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ
ಕ.ಪ್ರ. ವಾರ್ತೆ ್ಣ ಜಾವಗಲ್ ್ಣ ಮೇ 21
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಲ್ಲಿ ನೀರು ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿ ಪ್ರಮುಖವಾಗಿದೆ ಎಂದು ಬೆಂಗಳೂರಿನ ಭಾರತೀಯ ಸೇವಾ ಸಂಸ್ಥೆಯ ಸಂಪನ್ಮೂಲವ್ಯಕ್ತಿ ಕರುಣಾಕರ ಅಭಿಪ್ರಾಯ ಪಟ್ಟರು.
ಜಾವಗಲ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕುಡಿಯುವ ನೀರು ಮತ್ತು ಗುಣಮಟ್ಟ ಅರಿವು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಮಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ನೀರಿನ ಸದ್ಬಳಕೆ ಬಗ್ಗೆ ಮಹಿಳೆಯರು ಹೆಚ್ಚಾಗಿ ಮಾಹಿತಿ ಪಡೆದುಕೊಂಡು ಜನಸಾಮಾನ್ಯರಲ್ಲಿ ದ್ರವರೂಪದ ಚಿನ್ನವಾಗಿರುವ ನೀರಿನ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಕುಡಿಯುವ ನೀರು ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳಾದ ನೀರು ಮತ್ತು ನೈರ್ಮಲ್ಯ ಮಿಶನ್ ನೆರವು ಸಂಸ್ಥೆ, ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕರ ಸಮಾಜ ಸಂಸ್ಥೆಗಳು ಮತ್ತು ಅವುಗಳ ಪಾತ್ರ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ರಚನೆ, ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ವಾರ್ಷಿಕ ಆಯವ್ಯಯ ಅಂತರ್ಜಲ ಪುನಃಶ್ಚೇತನ, ನೈರ್ಮಲ್ಯ ಮತ್ತು ಶುಚಿತ್ವ, ನೀರಿನ ಗುಣಮಟ್ಟ ಪರೀಕ್ಷೆ, ಮೇಲುಸ್ತುವಾರಿ ಮತ್ತು ನಿಗಾ ವಿಷಯಗಳು, ಮತ್ತು ನಿರ್ಮಲ ಭಾರತ ಅಭಿಯಾನದಲ್ಲಿ ಎನ್ಆರ್ಇಜಿ ಯ ಸಂಯೋಜನೆ ಮುಂತಾದ ವಿಷಯಗಳ ಬಗ್ಗೆ ಸ್ಲೈಡ್ ಶೋ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು. ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದರು.
ಸಮಿತಿಯು 6 ತಿಂಗಳಿಗೊಮ್ಮೆ ಗ್ರಾಮ ಸಭೆ ನಡೆಸುವುದು, ವಾರ್ಷಿಕ ಆಯವ್ಯಯ ಮಂಡಿಸುವುದು, ಸಿಬ್ಬಂದಿ ವೇತನ ಪಾವತಿ ಮಾಡುವುದರ ಜತೆಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳ ಜನತೆಗೂ ಸಮರ್ಪಕವಾಗಿ ನೀರು ಸರಬರಾಜು ಮಾಡುವುದು ಸಮಿತಿಯ ಮುಖ್ಯ ಕರ್ತವ್ಯವಾಗಿದೆ ಎಂದರು.
ಮತೋಬ್ಬ ಸಂಪನ್ಮೂಲ ವ್ಯಕ್ತಿ ಲಿಂಗರಾಜು, ನೀರಿನಲ್ಲಿ ಕಂಡುಬರುವ ಕಬ್ಬಿಣಾಂಶ, ನೈಟ್ರೇಟ್, ರಾಡಿ, ಗಡಸುತನ, ಫ್ಲೋರೈಡ್ ಅಂಶ ಸೇರಿದಂತೆ ನಾನಾ ರಾಸಾಯನಿಕಗಳನ್ನು 7 ರೀತಿಯ ಪರೀಕ್ಷಾ ವಿಧಾನದ ಮೂಲಕ ಕಂಡು ಹಿಡಿಯುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು. ರಾಸಾಯನಿಕ ಮತ್ತು ಜೈವಿಕ ಮುಕ್ತ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮವೆಂದರು.
ಗ್ರಾಪಂ ಅಧ್ಯಕ್ಷೆ ಕವಿತಾಮಂಜುನಾಥ್, ಸದಸ್ಯರಾದ ಮಾಲಾ, ಸಿದ್ದಮ್ಮ, ಜ್ಯೋತಿ, ಮಂಜುಳ, ಮಲ್ಲೇಶಪ್ಪ ಇದ್ದರು.