ವಿಮರ್ಶೆಯಲ್ಲಿ ದೋಷ ದರ್ಶನ ಸರಿಯಲ್ಲ
ಮೈಸೂರು: ಎ.ಎನ್. ಮೂರ್ತಿರಾಯರ ದೇವರು ಕೃತಿಯ ದೋಷಗಳನ್ನೇ ಪ್ರಧಾನವನ್ನಾಗಿಸಿಕೊಂಡು ಡಾ.ಮಳಲಿ ವಸಂತಕುಮಾರ್ ಕೃತಿ ರಚಿಸಿರುವುದಾಗಿ ಹಿರಿಯ ಸಾಹಿತಿ ಡಾ.ಸಿಪಿಕೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಿವಿಕೆ ಪ್ರಕಾಶನ ಮತ್ತು ಕರ್ನಾಟಕ ವಿಚಾರ ವೇದಿಕೆಯು ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಡಾ.ಮಳಲಿ ವಸಂತಕುಮಾರ್ ಅವರ ಅಕ್ಕಿಹೆಬ್ಬಾಳು ಮೂರ್ತಿರಾವ್ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎ.ಎನ್.ಮೂರ್ತಿರಾವ್ ಬಹಳ ದೊಡ್ಡ ಲೇಖಕರು. ಅವರ ದೇವರು ಕೃತಿ ಕನ್ನಡದ ಮಹಾ ಕ್ರಾಂತಿಕಾರಿ ಕೃತಿ. ಅಂತೆಯೇ ದೇವರು ಕೃತಿ ಕುರಿತು ಬರೆದಿರುವ ಮಳಲಿ ಅವರ ಈ ಕೃತಿಯು ಅಪರೂಪದ ಕೃತಿ ಎಂಬುದರಲ್ಲಿ ಸಂಶಯ ಇಲ್ಲ. ಮೂರ್ತಿರಾಯರ ಜ್ಞಾನ ದೃಷ್ಟಿ, ಧೋರಣೆ ಅಪರಿಮಿತವಾದದ್ದು. ಗಾತ್ರದಲ್ಲಿ ಕೃತಿ ಕಿರಿದಾದರೂ ಪಾತ್ರದಲ್ಲಿ ಗಣ್ಯವಾದದ್ದು. ಅಂತಹ ಕೃತಿ ಬಗ್ಗೆ ಮಳಲಿ ಅವರು ವಿಮರ್ಶಿಸಿದ್ದಾರೆ. ಹೆಚ್ಚಾಗಿ ದೇವರು ಕೃತಿಯ ಭಾಷೆಯಲ್ಲಿನ ದೋಷ ಹುಡುಕಿದ್ದಾರೆ. ಅದು ಹೆಚ್ಚಾದಂತೆ ಕಾಣುತ್ತಿದೆ. ಆದರೆ ಮಳಲಿ ಅವರು ತಮ್ಮ ಕೃತಿಯ ಹೆಸರಿನಲ್ಲಿಯೇ ದೋಷ ಮಾಡಿದ್ದಾರೆ. ಅಕ್ಕಿಹೆಬ್ಬಾಳು ಮೂರ್ತಿರಾವ್ ಎಂಬುದು ತಪ್ಪು, ಅಕ್ಕಿಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್ ಎಂದಿರಬೇಕಿತ್ತು ಅಥವಾ ಎ.ಎನ್. ಮೂರ್ತಿರಾವ್ ಎಂದಾಗಬೇಕಿತ್ತು ಎಂದರು.