ವ್ಯಸನಮುಕ್ತ ಸಮಾಜ ನಿರ್ಮಾಣವಾಗಲಿ
ಕನ್ನಡಪ್ರಭ ವಾರ್ತ್ಣೆ ಹಾಸನ ್ಣ ಮೇ 21
ಮದ್ಯಪಾನ ಮಾಡುವವರಿಂದಲೇ ಹೆಚ್ಚು ಅಪಘಾತ ನಡೆಯುತ್ತಿದ್ದು, ಇಂತಹ ಅನಾಹುತ ತಪ್ಪಿಸಲು ಹಾಗೂ ನೆಮ್ಮದಿ ಜೀವನ ಸಾಗಿಸಲು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ಯಾಮಲಾ ದೇವಿ ಕರೆ ನೀಡಿದರು.
ನಗರದ ರಂಗೋಲಿಹಳ್ಳ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಬ್ರಹ್ಮಾಕುಮಾರೀಸ್ ಸಭಾಂಗಣದಲ್ಲಿ 'ನಮ್ಮ ಭಾರತ ವ್ಯಸನ ಮುಕ್ತ ಭಾರತ' ಯೋಜನೆಯಲ್ಲಿ 'ನಮ್ಮ ಹಾಸನ ವ್ಯಸನ ಮುಕ್ತ ಹಾಸನ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂಸ್ಕೃತಿ ಬದಲಾಗಿದೆ. ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಮರ್ಥಿಸಿಕೊಳ್ಳುತ್ತಾರೆ. ಕೆಲ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಮೊದಲು ಚಿಕ್ಕದಾಗಿ ಉಪಾಯೋಗಿಸಿ ನಂತರದ ದಿನಗಳಲ್ಲಿ ಹೆಚ್ಚಾಗಿ ಪರಿವರ್ತನೆ ಆಗುತ್ತಿರುವುದು ಮನುಷ್ಯನ ಜೀವನದಲ್ಲಿ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕುಡಿಯುವುದನ್ನು ಬಿಡಿಸುವುದು ಕಷ್ಟಕರವಾದರೂ ಚಿಕ್ಕವಯಸ್ಸಿನಲ್ಲಿಯೇ ತಿಳಿವಳಿಕೆ ನೀಡಿ ಜಾಗೃತರಾಗಿ ಮಾಡಬೇಕು. ಸಿಗರೇಟ್, ಬೀಡಿ, ಗುಟ್ಕ, ಪೈಂಟ್ ವಾಸನೆ, ಔಷಧ, ಫೆವಿಕಾಲ್ ಹಾಗೂ ಹಾಲ್ಕೋಹಾಲ್ ಇರುವಂತಹದನ್ನು ವಿವೇಚನೆ ಇಲ್ಲದೇ ಸೇವಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದೆಂದು ಕಾನೂನು ತಂದು ದಂಢ ವಿಧಿಸುತ್ತಿದ್ದರೂ ಮದ್ಯ ಸೇವನೇ ಮಾತ್ರ ಕಡಿಮೆ ಆಗುತ್ತಿಲ್ಲ ಎಂದು ವಿಷಾದಿಸಿದ ಅವರು, ಸಿಗರೇಟ್ ಸೇದುವವರಿಗೆ ಮಾತ್ರವಲ್ಲ ಪಕ್ಕದಲ್ಲಿರುವ ವ್ಯಕ್ತಿಗೂ ಕೂಡ ಕಾಯಿಲೆಗಳು ಬರಲಿದೆ ಎಂದು ಎಚ್ಚರಿಸಿದರು.
ಹಿರಿಯ ರಾಜಯೋಗ ಶಿಕ್ಷಕ ಮೈಸೂರಿನ ಪ್ರಾಣೇಶ್ ಮಾತನಾಡಿ, ಇಂದು ಸಮಾಜದಲ್ಲಿ ಅತಿಯಾದ ಮತ್ತು ಬಹು ವೇಗದ ಬದಲಾವಣೆಗಳನ್ನು ಬದುಕಿನ ಪ್ರತಿ ಹಂತದಲ್ಲಿಯೂ ಕಾಣುತ್ತಿದ್ದೇವೆ. ಈ ಬದಲಾವಣೆಗಳಿಗೆ ಒಗ್ಗಿಕೊಳ್ಳಲಾಗದೆ ಮಾನವನು ಒಂದಲ್ಲಾ ಒಂದು ಬಗೆಯ ಬೇಸರ, ಭಯ, ಮಾನಸಿಕ ಒತ್ತಡ, ಉದ್ವೇಗ, ಚಿಂತೆ, ನಿರಾಶೆ, ಹತಾಶೆಗೆ ಒಳಗಾಗುತ್ತಿದ್ದಾನೆ. ಹಲವರು ಇವುಗಳಿಂದ ಮುಕ್ತರಾಗಲು ಯೋಗ, ವ್ಯಾಯಾಮ, ಧ್ಯಾನ, ಅಧ್ಯಯನ, ಸತ್ಸಂಗ, ಅಧ್ಯಾತ್ಮಿಕ ಚಿಂತನೆಗಳು ಮೊದಲಾದ ಸಾತ್ವಿಕ ಮತ್ತು ಆರೋಗ್ಯಪೂರ್ಣ ಮಾರ್ಗೋಪಾಯಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆದರೆ, ಇನ್ನು ಕೆಲವರು ಅನಾರೋಗ್ಯಕರ ಮಾರ್ಗಗಳಾದ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ವ್ಯಸನಗಳಿಗೆ ದಾಸರಾದವರು ದೈಹಿಕವಾಗಿ, ಮಾನಸಿಕವಾಗಿ ಮತ್ತು ನೈತಿಕವಾಗಿ ನಿಶ್ಯಕ್ತರಾಗುತ್ತ ತಮ್ಮ ಮಾನಸಿಕ ಶಾಂತಿ, ಸಮಾಧಾನ, ಧೈರ್ಯ, ಸ್ಥೈರ್ಯ, ಉಲ್ಲಾಸ, ಭರವಸೆಗಳನ್ನು ಕಳೆದುಕೊಳುತ್ತಾ ಹೋಗುತ್ತಾರೆ.
ವ್ಯಸನಿಗಳಿಗೆ ಅವುಗಳಿಂದ ಮುಕ್ತರಾಗುವ ಇಚ್ಛೆಇದ್ದರೂ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿಯ ಕೊರತೆಯಿಂದ ಅವುಗಳಿಂದ ಹೊರಬರಲು ಸಾಧ್ಯವಾಗಿರುವುದಿಲ್ಲ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಕಳೆದ 77 ವರ್ಷಗಳಿಂದ ಅಧ್ಯಾತ್ಮಿಕ ತಿಳವಳಿಕೆ, ನೈತಿಕ ಶಿಕ್ಷಣ, ಚಾರಿತ್ರ್ಯ ನಿರ್ಮಾಣ ಮತ್ತು ರಾಜಯೋಗದ ತರಬೇತಿ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವಲ್ಲಿ ಕಾರ್ಯಪ್ರವೃತ್ತವಾಗಿದೆ. ಪ್ರತಿ ವರ್ಷವು ಹತ್ತು-ಹಲವು ಕಾರ್ಯಕ್ರಮಗಳನ್ನು ಈಶ್ವರೀಯ ವಿಶ್ವವಿದ್ಯಾಲಯವು ಆಯೋಜಿಸುತ್ತ ಬಂದಿದೆ ಎಂದು ಹೇಳಿದರು.
ಈ ದಿಶೆಯಲ್ಲಿ ಮತ್ತೊಂದು ಹೆಜ್ಜೆಯಾಗಿ, ವ್ಯಸನಗಳಿಗೆ ಒಳಗಾಗಿರುವವರಿಗೆ ಸರಿಯಾದ ಅರಿವು ಮೂಡಿಸಿ, ಮಾನಸಿಕವಾಗಿ ಸದೃಢರನ್ನಾಗಿ ಮಾಡಿ ಅವರಲ್ಲಿ ಪುನಃಶ್ಚೇತನ ತುಂಬಿ, ಶಾಶ್ವತವಾಗಿ ವ್ಯಸನಗಳಿಂದ ಮುಕ್ತರನ್ನಾಗಿ ಮಾಡಿ, ಉತ್ತಮ ಬದುಕನ್ನು ಬಾಳುವ ಪ್ರೇರಣೆಯನ್ನು ಕೊಡುವ ಉದ್ದೇಶ ದಿಂದ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಬ್ರಹ್ಮಾಕುಮರೀಸ್‌ನ ಸಂಚಾಲಕಿ ಮೀನಾ ಅಧ್ಯಕ್ಷತೆ ವಹಿಸಿದ್ದರು. ಆಶ್ರಯ ಕ್ಲಿನಿಕ್‌ನ ಡಾ. ಕಿರಣ್‌ಕುಮಾರ್, ಅನಾಮಿಕ ಅಮಲುರೋಗ ತಜ್ಞ ಬಾಳ್ಳುಪೇಟೆ ಲೂಯಿಸ್ ಇತರರು ಇದ್ದರು.