ದರೋಡೆಕೋರರ ಪತ್ತೆಗೆ ತಂಡ
ಹಾಸನ: ದಂಡುಪಾಳ್ಯದ ರೀತಿ ಜಿಲ್ಲೆಯ ನಾನಾ ಕಡೆಗಳಲ್ಲಿ ಕೃತ್ಯ ಎಸಗಿರುವ ಮೂವರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ಮಗ್ಗೆಯ ಪ್ರದೀಪ್, ಕಾಗನೂರು ದೇವರಾಜ್, ಬಾಚೇನಹಳ್ಳಿ ಯೋಗೀಶ್ ಎಂಬವರೇ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ.
ನಗರದ ಪೊಲೀಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಆಲೂರು ತಾಲೂಕು ಮಳಗಳಲೆ ಎಂಬಲ್ಲಿ ಒಂಟಿ ಮನೆ ಮೇಲೆ 7 ಜನರ ದರೋಡೆಕೋರರ ತಂಡ ಪೆಟ್ರೋಲ್ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಒಳಗಿದ್ದ ಕುಟುಂಬದವರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೆ ಮನೆ ಒಳಗಿದ್ದ 6 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು.
ನಂತರ ಇದೆ ರೀತಿ ಸಕಲೇಶಪುರ ಪಟ್ಟಣದ ದಯಾಳುಮಾತೆ ಚರ್ಚಿನ ಫಾದರ್ ವಿನ್ಸೆಂಟ್ ಡಿಸೋಜಾ ಮನೆ ದರೋಡೆ ಮಾಡಿ ನಗ ನಾಣ್ಯ ದೋಚಿ ಕಣ್ಮರೆಯಾಗಿದ್ದರು ಎಂದು ಹೇಳಿದರು. ತಮ್ಮ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿತ್ತು. ಯಶಸ್ವಿ ಕಾರ್ಯಾಚರಣೆಯಿಂದಾಗಿ ನಾಲ್ಕು ಆರೋಪಿಗಳ ಪತ್ತೆ ಮಾಡುವಲ್ಲಿ ಸಫಲರಾಗಿದ್ದೇವೆ ಎಂದು ಹೇಳಿದರು.7 ಆರೋಪಿಗಳಲ್ಲಿ ಉಳಿದ ಮೂವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ದಂಡು ಪಾಳ್ಯದ ರೀತಿ ಈ 7 ಜನರು ಸೇರಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಹೇಳಿದರು.