ನಕಲಿ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡಿದರೆ ಕ್ರಮ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಮೇ 22
ಖಾಸಗಿ ವ್ಯಾಪಾರಸ್ಥರು ಹಾಗೂ ಸಹಕಾರ ಸಂಘಗಳ ಮಾರಾಟಗಾರರು ನಕಲಿ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡಿದರೇ ಕಾನೂನು ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಶಿವರಾಜು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸಹಕಾರಿ ಸಂಘ, ಸಂಸ್ಥೆಗಳು ಮತ್ತು ಖಾಸಗಿ ರಸಗೊಬ್ಬರ ಮಾರಟ ಅಂಗಡಿಗಳ ಮಾಲೀಕರಿಗೆ ಇತ್ತೀಚೆಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಬೀಜ ವಿತರಣೆಯನ್ನು ಆರಂಭಿಸಲಾಗಿದ್ದು, ಮಾರಾಟದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಕಟ್ಟುನಿಟ್ಟಾಗಿ ಪಾಲಿಸಬೇಕು. ತೂಕ, ಅಳತೆ, ಮುದ್ರಿತವಾದ ದಿನಾಂಕ ಇತ್ಯಾದಿಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜಯ್ಯ ವರ್ತಕರು ಹಾಗೂ ಅಧಿಕಾರಿಗಳಿಗೆ ಎಲ್ಸಿಡಿ ತಂತ್ರಜ್ಞಾನ ಬಳಕೆಯ ಮೂಲಕ ದಾಖಲೆಯ ನಿರ್ವಹಣೆ, ಗುಣಮಟ್ಟ ಪರಿಶೀಲನೆ, ರಸೀದಿ ನಮೂನೆ, ಪ್ರತಿ ತಿಂಗಳು ಮಾರಾಟ ಮಾಡಿದ ದಾಸ್ತಾನುಗಳ ವಿವರ, ಮಾರಾಟಗಾರರ ವಿಳಾಸ, ಅನುಮತಿ ಪತ್ರ, ಬೆಲೆ ಇತ್ಯಾದಿ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿದರು. ಇದರ ಸದ್ಬಳಕೆ ಮಾಡಿಕೊಂಡು ನಿಯಮ ಪಾಲನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು. ಈ ಸಭೆಯಲ್ಲಿ ತಹಶೀಲ್ದಾರ್ ನಟರಾಜ್, ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ನಾನಾ ಹೋಬಳಿಗಳ ಕೃಷಿ ಅಧಿಕಾರಿಗಳು, ಸಹಕಾರ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಬಿತ್ತನೆ ಬೀಜ ಮಾರಾಟಗಾರರು ಪಾಲ್ಗೊಂಡಿದ್ದರು.