ನಾಳೆ ಬಾಣಾವರ ಬಂದ್‌ಗೆ ರೈತರ ನಿರ್ಧಾರ
ಅರಸೀಕೆರೆ : ತಾಲೂಕಿನ ಬಾಣಾವರದಿಂದ ಹುಳಿಯಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಆರಂಭಿಸಿರುವ ಪ್ರತಿಭಟನೆ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಯಾವುದೇ ಆಧಿಕಾರಿಗಳು ಭೇಟಿ ನೀಡದಿರುವುದರಿಂದ ರೈತರು ಬಾಣಾವರ ಬಂದ್‌ಗೆ ಕರೆ ನೀಡಲು ನಿರ್ಧರಿಸಿದ್ದಾರೆ.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಬಾಣಾವರದಿಂದ ಜಾವಗಲ್ ವರೆಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿದ್ದರೂ ಬಾಣಾವರದಿಂದ ಮಲ್ಲಾಪುರ, ಶ್ಯಾನೇಗೆರೆ, ಕಲ್ಲುಸಾದರಹಳ್ಳಿ, ಕಣಕಟ್ಟೆ ಮಾರ್ಗವಾಗಿ ಪಂಚನಹಳ್ಳಿಗೆ ತಲುಪುವ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆಂದು ದೂರಿದರು.
ಜನರ ಸಮಸ್ಯೆಗಳತ್ತ ಗಮನ ಹರಿಸದೇ ಇರುವ ಅಧಿಕಾರಿಗಳ ವಿರುದ್ಧ ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು, ವರ್ತಕರು, ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ಮೇ 24ರ ಶನಿವಾರ ಬಾಣಾವರ್ ಬಂದ್‌ಗೆ ಕರೆ ನೀಡಲಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 206ರನ್ನು ತಡೆದು ಪ್ರತಿಭಟನೆ ನಡೆಸಲಾಗುವುದೆಂದೂ ತಿಳಿಸಿದರು.