ನೋಟಾ ಮತ ಹಾಕುವುದಾಗಿ ಪ್ರಚಾರ ಪಡೆದ ಗ್ರಾಮಸ್ಥರು
ಸಕಲೇಶಪುರ: ಲೋಕಸಭಾ ಚುನಾವಣೆಯಲ್ಲಿ ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶನಗರದ ಗ್ರಾಮಸ್ಥರು ಕುಡಿಯುವ ನೀರು ನೀಡದಿರುವ ಸಿಟ್ಟಿಗೆ ನೋಟಾ ಮತವನ್ನು ಸಾಮೂಹಿಕವಾಗಿ ಚಲಾಯಿಸಿರುವುದಾಗಿ ಸುದ್ದಿಹಬ್ಬಿಸಿ ಗ್ರಾಮಸ್ಥರು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ, ಫಲಿತಾಂಶ ಬಂದ ನಂತರ ತಿಳಿದಿದ್ದು ಅಲ್ಲಿ ಚಲಾವಣೆಯಾದ ನೋಟ ಮತಗಳು ಕೇವಲ 9 .
ಸಾಮೂಹಿಕವಾಗಿ ನೋಟಾ ಚಲಾಯಿಸುವ ಸುದ್ದಿಯ ಜಾಡು ಹಿಡಿದು ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶನಗರಕ್ಕೆ ಚುನಾವಣೆಯ ದಿನ ತಾಲೂಕಿನ ಸುದ್ದಿಗಾರರು ದೌಡಾಯಿಸಿ ಬಾರಿ ಸುದ್ದಿ ಮಾಡಿದ್ದರು. ಆದರೆ, ಮತ ಎಣಿಕೆಯ ನಂತರ ಬ್ಯಾಲೆಟ್ ಬಾಕ್ಸ್ ನಲ್ಲಿ ಇದ್ದದ್ದು ಬರಿ 9 ನೋಟಾ ಮತಗಳು ಮಾತ್ರ. ಇಲ್ಲಿ ಕಾಂಗ್ರೆಸ್‌ಗೆ 490, ಬಿಜೆಪಿ 270, ಜೆಡಿಎಸ್ 159 ಮತ್ತು ಬಿಎಸ್‌ಪಿಗೆ 70 ಮತಗಳು ಬಿದ್ದಿವೆ. ಗ್ರಾಮಸ್ಥರು ಮತದಾನದ ಸಂದರ್ಭದಲ್ಲಿ ಸಭೆ ಸೇರಿ ಚರ್ಚಿಸಿ ಕುಡಿಯುವ ನೀರು, ರಸ್ತೆ ಚರಂಡಿ ಸಮಸ್ಯೆ ಬಗೆಹರಿಸುವಂತೆ ಅನೇಕಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸದೆ ಇದ್ದುದರಿಂದ ಈ ಚುನಾವಣೆಯಲ್ಲಿ ತಿರಸ್ಕಾರ ಮತ (ನೋಟಾ) ಚಲಾಯಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದರು.
ಗ್ರಾಮಪಂಚಾಯತಿ ಕಾಟಾಚಾರಕ್ಕೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಇದಕ್ಕೆ ಪೈಪುಗಳನ್ನು ಅಳವಡಿಸಿಲ್ಲ. ಊರಲ್ಲಿರುವ ಬೋರ್‌ವೆಲ್ ಇದೆಯಾದರೂ ನೀರು ಬರುವುದಿಲ್ಲ ಇದರ ಬಗ್ಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.