ರೈತರಿಗೆ ರಶೀದಿ ನೀಡುವುದು ಕಡ್ಡಾಯ
ಚನ್ನರಾಯಪಟ್ಟಣ: ರಸಗೊಬ್ಬರ ಮಾರಾಟ ಮಾಡುವ ಚಿಲ್ಲರೆ ಹಾಗೂ ಸಗಟು ವ್ಯಾಪಾರಸ್ಥರು ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು. ರಶೀದಿಯಲ್ಲಿ ರೈತನ ಸಹಿ ಹಾಗೂ ವಿಳಾಸವನ್ನು ತಪ್ಪದೆ ನಮೂದಿಸಬೇಕು ಎಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನಾಗರಾಜಯ್ಯ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ಇಲಾಖೆ ಬುಧವಾರ ಏರ್ಪಡಿಸಿದ್ದ ರಸಗೊಬ್ಬರದ ಮಾರಾಟದ ವಿವರ ಕಾರ್ಯಕ್ರಮದಲ್ಲಿ ಮಾತನಾಡುತ್ತ, ರಸಗೊಬ್ಬರದ ಸಬ್ಸಿಡಿಯಲ್ಲಿ ಬದಲಾ ವಣೆಗಳಾಗುತ್ತಿದ್ದು ಸರ್ಕಾರ ನೇರವಾಗಿ ಸಬ್ಸಿಡಿಯನ್ನು ರೈತರಿಗೇ ನೀಡಲು ಯೋಚಿಸಿರುವುದರಿಂದ ರೈತರಿಗೆ ಮಾರಾಟ ಮಾಡಿದ್ದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳುವುದರ ಜೊತೆಗೆ ರೈತರಿಗೆ ರಶೀದಿ ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಬೇಡಿಕೆ ಹೆಚ್ಚಾಗಿದ್ದು, ದರ ಉತ್ಪಾದನೆ ಕಡಿಮೆಯಾಗುತ್ತಿದೆ. ಈಗಾಗಲೇ 2008 ಮತ್ತು 2009ನೇ ಸಾಲಿನಲ್ಲಿ ಗೊಬ್ಬರ ತಯಾರಿಸುವ ರಾಸಾಯನಿಕ ಕಂಪನಿಗಳಿಗೆ ಅಂದಾಜು ರೂ.1,37,000 ಕೋಟಿ ಹಣ ಸಂದಾಯವಾಗಿಲ್ಲ. ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಖರೀದಿಸಿದ ರಶೀದಿಯ ಆಧಾರ ಮೇಲೆ ನೇರವಾಗಿ ರೈತರಿಗೆ ಸಬ್ಸಿಡಿ ಹಣ ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಸಬ್ಸಿಡಿ ಹಣವನ್ನು ನಿಲ್ಲಿಸಿರುವುದರಿಂದ ನಾನಾ ಕಂಪನಿಗಳು ಅದರದೇ ಆದ ದರ ಪ್ರಕಟಿಸುತ್ತಿವೆ ಎಂದರು.